×
Ad

ಅಮೆರಿಕ ಪ್ರವೇಶ ನಿಷೇಧ ಪಟ್ಟಿಯಿಂದ ಇರಾಕ್ ಹೊರಗೆ?

Update: 2017-03-01 20:16 IST

ವಾಶಿಂಗ್ಟನ್, ಮಾ. 1: ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನೂತನ ವಲಸೆ ಆದೇಶವು ಈಗಾಗಲೇ ಅಮೆರಿಕ ಪ್ರವೇಶ ನಿಷೇಧಕ್ಕೆ ಒಳಗಾಗಿರುವ ದೇಶಗಳ ಪಟ್ಟಿಯಿಂದ ಇರಾಕನ್ನು ಹೊರಗಿಡಲಿದೆ ಎಂದು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ಅಸೋಸಿಯೇಟಡ್ ಪ್ರೆಸ್ ಮಂಗಳವಾರ ವರದಿ ಮಾಡಿದೆ.

ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ ಪೆಂಟಗನ್ ಮತ್ತು ವಿದೇಶಾಂಗ ಇಲಾಖೆಯ ಒತ್ತಡಕ್ಕೆ ಒಳಗಾಗಿ ಈ ತಿದ್ದುಪಡಿಯನ್ನು ತರಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಐಸಿಸ್ ವಿರುದ್ಧದ ಹೋರಾಟದಲ್ಲಿ ಇರಾಕ್ ವಹಿಸುತ್ತಿರುವ ಮಹತ್ವದ ಪಾತ್ರವನ್ನು ಪರಿಗಣಿಸಿ ಏಳು ಮುಸ್ಲಿಮ್ ಬಾಹುಳ್ಯದ ದೇಶಗಳ ಪಟ್ಟಿಯಿಂದ ಇರಾಕನ್ನು ಹೊರಗಿಡುವ ಬಗ್ಗೆ ಪರಿಶೀಲಿಸುವಂತೆ ಈ ಇಲಾಖೆಗಳು ಶ್ವೇತಭವನವನ್ನು ಒತ್ತಾಯಿಸಿದ್ದವು.

ನೂತನ ಆದೇಶಕ್ಕೆ ಟ್ರಂಪ್ ಬುಧವಾರ ಸಹಿ ಹಾಕುವರೆಂದು ನಿರೀಕ್ಷಿಸಲಾಗಿದೆ. ಅವರ ಈ ಮೊದಲಿನ ಆದೇಶಕ್ಕೆ ಅಮೆರಿಕದ ಫೆಡರಲ್ ನ್ಯಾಯಾಲಯಗಳು ತಡೆಯಾಜ್ಞೆ ನೀಡಿರುವುದನ್ನು ಸ್ಮರಿಸಬಹುದಾಗಿದೆ.

ಮಂಗಳವಾರ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಟ್ರಂಪ್, ಅಮೆರಿಕಕ್ಕೆ ಹೊಸದಾಗಿ ಬರುವವರನ್ನು ನಿಯಂತ್ರಿಸಲು ಹಾಗೂ ಕೌಶಲ್ಯರಹಿತ ಕೆಲಸಗಾರರ ಹರಿವನ್ನು ಕಡಿಮೆ ಮಾಡಲು ನೂತನ ಅರ್ಹತೆ ಆಧಾರಿತ ವ್ಯವಸ್ಥೆಯೊಂದನ್ನು ಜಾರಿಗೆ ತರುವುದಾಗಿ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಇದು ಅವರು ಆಮೂಲಾಗ್ರ ವಲಸೆ ಸುಧಾರಣೆಯೊಂದನ್ನು ಜಾರಿಗೆ ತರುವ ಸಾಧ್ಯತೆಯ ಬಗ್ಗೆ ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News