ಕಿಮ್ ಜಾಂಗ್ ನಾಮ್ ಹತ್ಯೆ: 2 ಮಹಿಳೆಯರ ವಿರುದ್ಧ ಕೊಲೆ ಆರೋಪ
ಕೌಲಾಲಂಪುರ, ಮಾ. 1: ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಪರಿತ್ಯಕ್ತ ಸಹೋದರ ಕಿಮ್ ಜಾಂಗ್ ನಾಮ್ ಅವರ ಹತ್ಯೆಗೆ ಸಂಬಂಧಿಸಿ ಇಂಡೋನೇಶ್ಯ ಮತ್ತು ವಿಯೆಟ್ನಾಮ್‌ನ ಇಬ್ಬರು ಮಹಿಳೆಯರ ವಿರುದ್ಧ ಮಲೇಶ್ಯ ಬುಧವಾರ ಕೊಲೆ ಆರೋಪವನ್ನು ಹೊರಿಸಿದೆ.
ಜಕಾರ್ತ ನಿವಾಸಿ ಒಂದು ಮಗುವಿನ ತಾಯಿ 25 ವರ್ಷದ ಸಿಟಿ ಆಯಿಶಾ ಮತ್ತು ವಿಯೆಟ್ನಾಮ್‌ನ 28 ವರ್ಷದ ಡೋನ್ ತಿ ಹುವೊಂಗ್‌ರನ್ನು ಅವರ ಅಪರಾಧ ಸಾಬೀತಾದರೆ ಗಲ್ಲಿಗೇರಿಸಬಬಹುದಾಗಿದೆ. ಅವರಿಬ್ಬರು ಫೆಬ್ರವರಿ 13ರಂದು ಕೌಲಾಲಂಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತ್ಯಂತ ಮಾರಕ ರಾಸಾಯನಿಕವನ್ನು ಮುಖಕ್ಕೆ ಸಿಂಪಡಿಸಿ ಕಿಮ್ ಜಾಂಗ್ ನಾಮ್‌ರನ್ನು ಕೊಂದಿದ್ದರು.
ಈ ಹತ್ಯೆಯನ್ನು ಉತ್ತರ ಕೊರಿಯ ಸರಕಾರ ಮಾಡಿಸಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಹಾಸ್ಯ ವೀಡಿಯೊದ ತಮಾಷೆ ಸನ್ನಿವೇಶವೊಂದರ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವಂತೆ ಅವರಿಗೆ ಸೂಚಿಸಲಾಗಿತ್ತು ಹಾಗೂ ಅದಕ್ಕಾಗಿ ಅವರಿಗೆ ಸ್ವಲ್ಪ ಹಣವನ್ನೂ ಕೊಡಲಾಗಿತ್ತು ಎಂದು ಆರೋಪಿಸಲಾಗಿದೆ.
ಮಹಿಳೆಯರಿಗೆ ಕೈಕೋಳ ಹಾಗೂ ಗುಂಡು ನಿರೋಧಕ ಮೇಲಂಗಿಗಳನ್ನು ತೊಡಿಸಿ ಪೊಲೀಸರು ನ್ಯಾಯಾಲಯಕ್ಕೆ ಕರೆತಂದರು. ಅವರ ವಿರುದ್ಧದ ಆರೋಪಗಳನ್ನು ಓದಿ ಹೇಳಲಾಯಿತು.
ಈ ಹತ್ಯೆಯನ್ನು ಉತ್ತರ ಕೊರಿಯದ ಏಜಂಟರು ಸಂಘಟಿಸಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಮತ್ತು ದಕ್ಷಿಣ ಕೊರಿಯದ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.
ಮುಂದಿನ ವಿಚಾರಣೆ ಎಪ್ರಿಲ್ 13ರಂದು ನಡೆಯಲಿದೆ.
ಸಮೂಹ ನಾಶಕ ಅಸ್ತ್ರ ಎಂಬುದಾಗಿ ವಿಶ್ವಸಂಸ್ಥೆ ಬಣ್ಣಿಸಿರುವ ವಿಎಕ್ಸ್ ನರ್ವ್ ಏಜಂಟ್ ಎಂಬ ಅತ್ಯಂತ ಮಾರಕ ರಾಸಾಯನಿಕವನ್ನು ಸಿಂಪಡಿಸಿ ನಾಮ್‌ರನ್ನು ಕೊಲ್ಲಲಾಗಿದೆ. ಅವರು ನಿಮಿಷಗಳಲ್ಲೇ ಕೊನೆಯುಸಿರೆಳೆದರು.