×
Ad

ದಕ್ಷಿಣ ಆಫ್ರಿಕ ವಿರುದ್ಧ ಸರಣಿ ಸಮಬಲಗೊಳಿಸಿದ ಕಿವೀಸ್

Update: 2017-03-01 23:17 IST

ಹ್ಯಾಮಿಲ್ಟನ್, ಮಾ.1: ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾದ ಮಾರ್ಟಿನ್ ಗಪ್ಟಿಲ್ ಸಿಡಿಸಿದ ಭರ್ಜರಿ ಶತಕದ ಸಹಾಯದಿಂದ ನ್ಯೂಝಿಲೆಂಡ್ ತಂಡ ದಕ್ಷಿಣ ಆಫ್ರಿಕ ವಿರುದ್ಧದ ನಾಲ್ಕನೆ ಏಕದಿನ ಪಂದ್ಯವನ್ನು 7 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿತು. ಈ ಮೂಲಕ 5 ಪಂದ್ಯಗಳ ಏಕದಿನ ಅಂತಾರಾಷ್ಟ್ರೀಯ ಸರಣಿಯಲ್ಲಿ 2-2 ರಿಂದ ಸಮಬಲ ಸಾಧಿಸಿತು.

ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 280 ರನ್ ಗುರಿ ಪಡೆದಿದ್ದ ಕಿವೀಸ್ ಗಪ್ಟಿಲ್(ಅಜೇಯ 180, 138 ಎಸೆತ, 15 ಬೌಂಡರಿ, 11 ಸಿಕ್ಸರ್) ಅವರ ಶತಕದ ಬೆಂಬಲದಿಂದ ಇನ್ನೂ 5 ಓವರ್‌ಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು. 3ನೆ ಪಂದ್ಯದಲ್ಲಿ 159 ರನ್ ಸೋಲಿಗೆ ಸೇಡು ತೀರಿಸಿಕೊಂಡ ನ್ಯೂಝಿಲೆಂಡ್ ಸರಣಿಯನ್ನು 2-2 ರಿಂದ ಸಮಬಲಗೊಳಿಸಿತು. ಶನಿವಾರ ಆಕ್ಲಂಡ್‌ನಲ್ಲಿ ಸರಣಿ ನಿರ್ಣಾಯಕ ಪಂದ್ಯ ನಡೆಯಲಿದೆ.

ಸ್ನಾಯು ಸೆಳೆತದಿಂದಾಗಿ ಐದು ವಾರ ಕ್ರಿಕೆಟ್‌ನಿಂದ ದೂರವುಳಿದಿದ್ದ ಗಪ್ಟಿಲ್ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ ನ್ಯೂಝಿಲೆಂಡ್‌ನ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಕೇವಲ 82 ಎಸೆತಗಳಲ್ಲಿ 12ನೆ ಶತಕ ಪೂರೈಸಿದ ಗಪ್ಟಿಲ್ ಅವರು ರಾಸ್ ಟೇಲರ್(66) ಅವರೊಂದಿಗೆ 3ನೆ ವಿಕೆಟ್‌ಗೆ 180 ರನ್ ಜೊತೆಯಾಟ ನಡೆಸಿ ತಂಡದ ಗೆಲುವಿನ ಹಾದಿ ಸುಗಮಗೊಳಿಸಿದರು. ಗಪ್ಟಿಲ್ ರನ್ ಬೆನ್ನಟ್ಟುವಾಗ ನಾಲ್ಕನೆ ಗರಿಷ್ಠ ವೈಯಕ್ತಿಕ ಸ್ಕೋರನ್ನು ದಾಖಲಿಸಿದರು.

ದಕ್ಷಿಣ ಆಫ್ರಿಕ 279/8: ಇದಕ್ಕೆ ಮೊದಲು ಟಾಸ್ ಜಯಿಸಿದ ದಕ್ಷಿಣ ಆಫ್ರಿಕ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಾಯಕ ಎಬಿಡಿ ವಿಲಿಯರ್ಸ್(ಅಜೇಯ 72) ಗರಿಷ್ಠ ಸ್ಕೋರ್ ದಾಖಲಿಸಿದರು. ಎಫ್‌ಡು ಪ್ಲೆಸಿಸ್(67), ಹಾಶಿಮ್ ಅಮ್ಲ(40) ಹಾಗೂ ವೇಯ್ನೆ ಪಾರ್ನೆಲ್(29 ರನ್) ತಂಡ ಸ್ಪರ್ಧಾತ್ಮಕ ಸ್ಕೋರ್ ದಾಖಲಿಸಲು ಮಹತ್ವದ ಕೊಡುಗೆ ನೀಡಿದರು.

ದಕ್ಷಿಣ ಆಫ್ರಿಕ ಒಂದು ಹಂತದಲ್ಲಿ 158 ರನ್‌ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಕ್ರಿಸ್ ಮೊರಿಸ್(28) ಹಾಗೂ ಪಾರ್ನೆಲ್ ಅವರೊಂದಿಗೆ ಉಪಯುಕ್ತ ಜೊತೆಯಾಟ ನಡೆಸಿದ ನಾಯಕ ಡಿವಿಲಿಯರ್ಸ್ ತಂಡವನ್ನು ಉತ್ತಮ ಮೊತ್ತದತ್ತ ಕೊಂಡೊಯ್ದರು. ದಕ್ಷಿಣ ಆಫ್ರಿಕ ಇನಿಂಗ್ಸ್‌ನ ಕೊನೆಯ 5 ಓವರ್‌ಗಳಲ್ಲಿ 72ರನ್ ಕಲೆ ಹಾಕಿತು.

ಸಂಕ್ಷಿಪ್ತ ಸ್ಕೋರ್

ದಕ್ಷಿಣ ಆಫ್ರಿಕ: 50 ಓವರ್‌ಗಳಲ್ಲಿ 279/8

(ಎಬಿಡಿ ವಿಲಿಯರ್ಸ್ ಅಜೇಯ 72, ಎಫ್‌ಡು ಪ್ಲೆಸಿಸ್ 67, ಅಮ್ಲ 40, ಜೀತನ್ ಪಟೇಲ್ 2-57)

ನ್ಯೂಝಿಲೆಂಡ್: 45 ಓವರ್‌ಗಳಲ್ಲಿ 280/3

(ಗಪ್ಟಿಲ್ ಅಜೇಯ 180, ಟೇಲರ್ 66, ತಾಹಿರ್ 2-56)

ಪಂದ್ಯಶ್ರೇಷ್ಠ: ಮಾರ್ಟಿನ್ ಗಪ್ಟಿಲ್.

4: ಏಕದಿನ ಕ್ರಿಕೆಟ್‌ನಲ್ಲಿ ರನ್ ಬೆನ್ನಟ್ಟುವಾಗ ಮಾರ್ಟಿನ್ ಗಪ್ಟಿಲ್(ಅಜೇಯ 180) ನಾಲ್ಕನೆ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು. ಶೇನ್ ವ್ಯಾಟ್ಸನ್ 2011ರಲ್ಲಿ ಬಾಂಗ್ಲಾದೇಶ ವಿರುದ್ಧ ಅಜೇಯ 185 ರನ್ ಗಳಿಸಿದ್ದು ಇದು ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಎಂ.ಎಸ್. ಧೋನಿ(2005, ಶ್ರೀಲಂಕಾ ವಿರುದ್ಧ ಅಜೇಯ 183), ವಿರಾಟ್ ಕೊಹ್ಲಿ (2012, ಪಾಕ್ ವಿರುದ್ಧ 183) ಆ ಬಳಿಕದ ಸ್ಥಾನದಲ್ಲಿದ್ದಾರೆ.

03: ಗಪ್ಟಿಲ್ ಏಕದಿನದಲ್ಲಿ ಮೂರು ಬಾರಿ 180 ಹಾಗೂ ಅದಕ್ಕಿಂತ ಹೆಚ್ಚು ಸ್ಕೋರ್ ಗಳಿಸಿರುವ ವಿಶ್ವದ ಏಕೈಕ ಬ್ಯಾಟ್ಸ್‌ಮನ್. ವಿವಿಯನ್ ರಿಚರ್ಡ್ಸ್, ಸಚಿನ್ ತೆಂಡುಲ್ಕರ್ ಹಾಗೂ ರೋಹಿತ್ ಶರ್ಮ ತಲಾ 2 ಬಾರಿ ಈ ಸಾಧನೆ ಮಾಡಿದ್ದಾರೆ.

03: ಗಪ್ಟಿಲ್ ನ್ಯೂಝಿಲೆಂಡ್‌ನ ಪರ ಮೂರು ಬಾರಿ ಗರಿಷ್ಠ ಸ್ಕೋರ್ ದಾಖಲಿಸಿದ ಏಕೈಕ ಆಟಗಾರ. ಗಪ್ಟಿಲ್ ಅಜೇಯ 237, ಅಜೇಯ 189, ಅಜೇಯ 180 ರನ್ ಗಳಿಸಿದ್ದಾರೆ.

11: ಗಪ್ಟಿಲ್ ಗರಿಷ್ಠ ಸಿಕ್ಸರ್(11) ಸಿಡಿಸಿದ ಕಿವೀಸ್‌ನ ಎರಡನೆ ಬ್ಯಾಟ್ಸ್‌ಮನ್. 2014ರಲ್ಲಿ ವೆಸ್ಟ್‌ಇಂಡೀಸ್ ವಿರುದ್ದ ದಾಖಲೆಯ ಶತಕ ಬಾರಿಸಿದ್ದ ಕೋರಿ ಆ್ಯಂಡರ್ಸನ್ ಒಟ್ಟು 14 ಸಿಕ್ಸರ್‌ಗಳನ್ನು ಸಿಡಿಸಿದ್ದರು.

02: ಕಿವೀಸ್ ತಂಡ ದಕ್ಷಿಣ ಆಫ್ರಿಕದ ವಿರುದ್ಧ 2ನೆ ಬಾರಿ ಗರಿಷ್ಠ ಸ್ಕೋರನ್ನು ಬೆನ್ನಟ್ಟಿ ಜಯಶಾಲಿಯಾಗಿದೆ. ಕಳೆದ ವರ್ಷ ಆಕ್ಲೆಂಡ್‌ನಲ್ಲಿ 298 ರನ್‌ನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು.

180: ಗಪ್ಟಿಲ್ ಹಾಗೂ ರಾಸ್ ಟೇಲರ್ ದಕ್ಷಿಣ ಆಫ್ರಿಕ ವಿರುದ್ಧ ಗರಿಷ್ಠ ಜೊತೆಯಾಟ ನಡೆಸಿದ ಸಾಧನೆ ಮಾಡಿದರು. 2007ರಲ್ಲಿ ಜಮ್ಮಿ ಹೌ ಹಾಗೂ ಬ್ರೆಂಡನ್ ಮೆಕಲಮ್ ಸೇರಿಸಿದ್ದ 154 ರನ್ ಜೊತೆಯಾಟದ ದಾಖಲೆ ಪತನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News