ಇಂಜಿನಿಯರ್‌ಗಳ ಪ್ರಮಾದ : ತುರ್ತು ಭೂಸ್ಪರ್ಷ ಮಾಡಿದ ಏರ್‌ಇಂಡಿಯಾ ವಿಮಾನ
ಹೊಸದಿಲ್ಲಿ, ಮಾ.1: ಹೊಸದಿಲ್ಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೊಚ್ಚಿನ್‌ಗೆ ಪ್ರಯಾಣ ಬೆಳೆಸಿದ್ದ ಏರ್ ಇಂಡಿಯಾ ವಿಮಾನವೊಂದು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಮರಳಿ ಲ್ಯಾಂಡ್ ಆಗಬೇಕಾಯಿತು. ಇಂಜಿನಿಯರ್‌ಗಳು ವಿಮಾನದ ಲ್ಯಾಂಡಿಂಗ್ ಗೇರ್‌ನ ಪಿನ್ ತೆಗೆಯಲು ಮರೆತದ್ದು ಈ ಘಟನೆಗೆ ಕಾರಣವಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಇಬ್ಬರು ಇಂಜಿನಿಯರ್‌ಗಳನ್ನು ತನಿಖೆ ಬಾಕಿ ಇರಿಸಿ ಕರ್ತವ್ಯದಿಂದ ಹಿಂದಕ್ಕೆ ಪಡೆಯಲಾಗಿದೆ ಎಂದು ಏರ್‌ಇಂಡಿಯಾದ ವಕ್ತಾರರು ತಿಳಿಸಿದ್ದಾರೆ.
234 ಪ್ರಯಾಣಿಕರಿದ್ದ ಎಐ933 ವಿಮಾನವು ಮಂಗಳವಾರ ಮುಂಜಾನೆ 5:36ಕ್ಕೆ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿತ್ತು. ಆದರೆ ವಿಮಾನದ ಚಕ್ರಗಳು ಒಳಕ್ಕೆ ಸೇರಿಕೊಳ್ಳದ ಕಾರಣ ಸುಮಾರು 40 ನಿಮಿಷಗಳ ಬಳಿಕ ವಿಮಾನವನ್ನು ಮರಳಿ ತುರ್ತು ಲ್ಯಾಂಡಿಂಗ್ ಮಾಡಬೇಕಾಯಿತು.
ವಿಮಾನದ ಲ್ಯಾಂಡಿಂಗ್ ಗೇರ್‌ಗೆ ಅಳವಡಿಸಲಾಗಿದ್ದ ಪಿನ್‌ಗಳನ್ನು ತೆಗೆಯಲು ಇಂಜಿನಿಯರ್ ಮರೆತಿರುವುದು ಗಮನಕ್ಕೆ ಬಂದ ಬಳಿಕ ಲೋಪವನ್ನು ಸರಿಪಡಿಸಿ, ಬೆಳಿಗ್ಗೆ 9:56ರ ವೇಳೆ ವಿಮಾನ ಸಂಚಾರ ಆರಂಭಿಸಿತು. ವಿಮಾನವು ನೆಲದ ಮೇಲಿದ್ದಾಗ ಲ್ಯಾಂಡಿಂಗ್ ಗೇರ್ ಅಕಸ್ಮಾತಾಗಿ ಮಡಚಿಕೊಳ್ಳದಂತೆ ಪಿನ್ ತಡೆಯುತ್ತದೆ. ಆದರೆ ವಿಮಾನ ಹಾರಾಟಕ್ಕೆ ಮುನ್ನ ಈ ಪಿನ್ ತೆಗೆಯದಿದ್ದರೆ ವಿಮಾನದ ಚಕ್ರಗಳನ್ನು ಒಳಕ್ಕೆ ಸೇರಿಸಲು ಅಸಾಧ್ಯವಾಗುತ್ತದೆ.