×
Ad

ವಾಟ್ಸ್ಆಪ್ ನಲ್ಲಿ ಡೈವೋರ್ಸ್ ನೀಡಿದ ಪತಿ, ಕೋರ್ಟ್ ಮೆಟ್ಟಿಲೇರಿದ ಮುಸ್ಲಿಂ ಮಹಿಳೆ

Update: 2017-03-02 20:22 IST

ಹೊಸದಿಲ್ಲಿ, ಮಾ.2: ತನ್ನ ಪತಿ ವಾಟ್ಸ್ ಆಪ್ ನಲ್ಲಿ ಮೂರು ಬಾರಿ ತಲಾಕ್ ಸಂದೇಶದ ಮೂಲಕ ಡೈವೋರ್ಸ್ ನೀಡಿರುವುದನ್ನು ಪ್ರಶ್ನಿಸಿ ದಿಲ್ಲಿಯ ಮುಸ್ಲಿಂ ಮಹಿಳೆಯೋರ್ವರು ನ್ಯಾಯಕ್ಕಾಗಿ ಕೋರ್ಟ್‌ನ ಮೊರೆ ಹೋಗಿದ್ದಾರೆ.

  ಹಳೆ ದಿಲ್ಲಿಯ ನಿವಾಸಿಯಾಗಿರುವ 28ರ ಹರೆಯದ ಈ ಮಹಿಳೆಯ ವಿವಾಹ ಆರು ವರ್ಷದ ಹಿಂದೆ ನಡೆದಿತ್ತು. ಕುಟುಂಬವರ್ಗದವರು ಆರಿಸಿದ ಯುವಕನನ್ನೇ ಈಕೆ ವಿವಾಹವಾಗಿದ್ದರು. ಆದರೆ ವರದಕ್ಷಿಣೆ ವಿಷಯದಲ್ಲಿ ಪತಿಯ ಮನೆಯಲ್ಲಿ ದಿನಾ ದೈಹಿಕ, ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಈಕೆ ದೂರಿದ್ದಾರೆ. ಮಗಳು ಹುಟ್ಟಿದ ಬಳಿಕ ಸಿಟ್ಟಿನಿಂದ ಪತಿ ತನ್ನ ಕುತ್ತಿಗೆ ಒತ್ತಿ ಸಾಯಿಸಲು ಯತ್ನಿಸಿದ್ದ. ಬಳಿಕ ತನ್ನಿಂದ ದೂರವಾಗಿದ್ದ. ಇದೀಗ ವಾಟ್ಸ್ ಆಪ್ ನಲ್ಲಿ ‘ತಲಾಕ್, ತಲಾಕ್, ತಲಾಕ್’ ಎಂದು ಮೂರು ಬಾರಿ ಸಂದೇಶ ನೀಡಿ ಡೈವೋರ್ಸ್ ನೀಡಿರುವುದಾಗಿ ಹೇಳುತ್ತಿದ್ದಾನೆ. ಈ ಪ್ರಕರಣದಲ್ಲಿ ತನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕೋರಿ ಮಹಿಳೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆದರೆ ವಿಪರ್ಯಾಸವೆಂದರೆ, ಸಂತ್ರಸ್ತ ಮಹಿಳೆಯ ತಂದೆ ಮಗಳ ಪರ ವಹಿಸುವುದೋ ಅಥವಾ ಧಾರ್ಮಿಕ ಪರಂಪರೆಯನ್ನು ಬೆಂಬಲಿಸುವುದೋ ಎಂಬ ಗೊಂದಲದಲ್ಲಿದ್ದಾರೆ.

  ಸಮಾನ ನಾಗರಿಕ ಸಂಹಿತೆ ವಿಷಯದಲ್ಲಿ ನಡೆಯುತ್ತಿರುವ ಚರ್ಚೆ ಮತ್ತು ವೈಯಕ್ತಿಕ ಕಾನೂನು ವಿಷಯದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬಹುದೇ ಎಂಬ ಚರ್ಚೆಗೆ ಈ ಪ್ರಕರಣ ಮತ್ತಷ್ಟು ಗ್ರಾಸ ಒದಗಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News