×
Ad

ದೇಶಭಕ್ತಿಯ ವ್ಯಾಖ್ಯಾನವನ್ನು ಅನುಕೂಲಕ್ಕೆ ತಕ್ಕಂತೆ ಬದಲಿಸಬೇಡಿ : ಬಿಜೆಪಿಗೆ ಶಿವಸೇನೆಯ ಟಾಂಗ್

Update: 2017-03-02 20:52 IST

ಮುಂಬೈ, ಮಾ.2: ಸೇನೆಯ ಯೋಧರ ಪತ್ನಿಯರು ನಂಬಿಕೆಗೆ ಅರ್ಹರಲ್ಲ ಎಂದು ಹೇಳಿಕೆ ನೀಡಿರುವ ಬಿಜೆಪಿಯ ಶಾಸಕನ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಬಿಜೆಪಿ ಪಕ್ಷವನ್ನು ಟೀಕಿಸಿರುವ ಶಿವಸೇನೆ, ಯಾರು ಕೂಡಾ ತನ್ನ ಅನುಕೂಲಕ್ಕೆ ತಕ್ಕಂತೆ ದೇಶಭಕ್ತಿಯ ವ್ಯಾಖ್ಯಾನವನ್ನು ಬದಲಿಸುವಂತಿಲ್ಲ ಎಂದು ಟಾಂಗ್ ನೀಡಿದೆ.

 ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯ ಬರಹದಲ್ಲಿ ಮಹಾರಾಷ್ಟ್ರದ ಬಿಜೆಪಿ ಶಾಸಕ ಪ್ರಶಾಂತ್ ಪರಿಚಾರಕ್ ಅವರ ಹೇಳಿಕೆಯನ್ನು ಖಂಡಿಸಲಾಗಿದೆ. ಸೇನೆಯ ಯೋಧರು ಗಡಿಭಾಗದಲ್ಲಿ ಸುದೀರ್ಘಾವಧಿ ಕರ್ತವ್ಯದಲ್ಲಿದ್ದಾಗ್ಯೂ ಅವರ ಪತ್ನಿಯರಿಗೆ ಮಗುವಾಗುತ್ತಿರುವುದು ಹೇಗೆ ಎಂದು ಪ್ರಶಾಂತ್ ಹೇಳಿಕೆ ನೀಡಿದ್ದರು. ಕಾಶ್ಮೀರದ ಪ್ರತ್ಯೇಕತಾವಾದಿ ಅಫ್ಜಲ್ ಗುರುವಿನ ಬೆಂಬಲಿಗರನ್ನು ದೇಶದ್ರೋಹಿ ಎಂದು ಕರೆಯುವುದಾದರೆ ಪ್ರಶಾಂತ್ ಅವರನ್ನು ಏನೆಂದು ಕರೆಯಬೇಕು ಎಂದು ಸಂಪಾದಕೀಯದಲ್ಲಿ ಪ್ರಶ್ನಿಸಲಾಗಿದೆ.

ಯೋಧರ ಮತ್ತವರ ಪತ್ನಿಯರ ಚಾರಿತ್ರಕ್ಕೆ ಮಸಿ ಬಳಿಯುವ ಯತ್ನ ಮಾಡಿದ್ದರೂ ಬಿಜೆಪಿಯ ಯಾರೊಬ್ಬರೂ ಈ ಹೇಳಿಕೆಯನ್ನು ಖಂಡಿಸಿಲ್ಲ. ಆದರೆ ದೇಶ ವಿರೋಧಿ ಘೋಷಣೆ ಕೂಗಿದರೆಂಬ ಆರೋಪದ ಮೇಲೆ ಕನ್ಹಯ್ಯ ಕುಮಾರ್‌ನನ್ನು ತಕ್ಷಣ ಪೊಲೀಸರು ಬಂಧಿಸಿದ್ದಾರೆ. ಕನ್ನಯ್ಯ ವಿರುದ್ಧ ಯಾವುದೇ ಸ್ಪಷ್ಟ ಪುರಾವೆ ಇಲ್ಲದಿದ್ದರೂ ಬಿಜೆಪಿ ಕೂಡಾ ಬೆಂಕಿಗೆ ತುಪ್ಪ ಸುರಿಯುವ ಕಾರ್ಯ ಮಾಡಿದೆ.

ಬಿಜೆಪಿ ಬೆಂಬಲಿತ ಎಬಿವಿಪಿ ಸಂಘಟನೆಯು ಜವಾಹರ್‌ಲಾಲ್ ನೆಹ್ರೂ ವಿವಿಯಲ್ಲಿ ಪ್ರಶಾಂತ್ ಹೇಳಿಕೆಯನ್ನು ಖಂಡಿಸಿ ಮಾತನಾಡುವವರನ್ನು ಬೆದರಿಸುತ್ತಿದೆ. ಹಾಗಾದರೆ ಕನ್ನಯ್ಯ ಕುಮಾರ್ ವಿರುದ್ಧ ಹೋರಾಟ ಎಂಬುದು ಕೇವಲ ಪ್ರಹಸನ ಎಂದು ಹೇಳಬಹುದು ಎಂದು ಸಂಪಾದಕೀಯ ಬರಹದಲ್ಲಿ ಹೇಳಲಾಗಿದೆ.

 ಮುಂಬೈ ಮಹಾನಗರಪಾಲಿಕೆಯಲ್ಲಿ ಸ್ಪಷ್ಟ ಬಹುಮತದ ಕೊರತೆ ಎದುರಿಸುತ್ತಿರುವ ಶಿವಸೇನೆಯು, ಮೇಯರ್ ಹುದ್ದೆ ದಕ್ಕಿಸಿಕೊಳ್ಳಲು ಕಾಂಗ್ರೆಸ್‌ನ ನೆರವು ಪಡೆಯಲು ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದೆ. ಇದನ್ನು ಬಿಜೆಪಿ ಟೀಕಿಸುತ್ತಿದ್ದು ಇದಕ್ಕೆ ಉತ್ತರವಾಗಿ ಶಿವಸೇನೆ, ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ ಜೊತೆ ಬಿಜೆಪಿಯ ಮೈತ್ರಿಯನ್ನು ಪ್ರಸ್ತಾಪಿಸಿ- ರಾಷ್ಟ್ರಭಕ್ತಿಯನ್ನು ಅವರವರ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸಲಾಗದು ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News