ಫಿಲಿಪ್ಪೀನ್ಸ್ ಜೈಲಿನಲ್ಲಿ ಕೈದಿಗಳ ಸಾಮೂಹಿಕ ಬೆತ್ತಲೆ ತಪಾಸಣೆ

Update: 2017-03-02 15:53 GMT

ಮಾನಮನಿಲಾ (ಫಿಲಿಪ್ಪೀನ್ಸ್), ಮಾ. 2: ಫಿಲಿಪ್ಪೀನ್ಸ್‌ನ ಜೈಲೊಂದರ ನೂರಾರು ಕೈದಿಗಳನ್ನು ಬೆತ್ತಲೆ ಮಾಡಿ ಮಾದಕದ್ರವ್ಯಕ್ಕಾಗಿ ಶೋಧ ನಡೆಸಿರುವುದು ವಿವಾದಕ್ಕೆ ಕಾರಣವಾಗಿದೆ.

ಬೆತ್ತಲೆ ಕೈದಿಗಳ ಶೋಧ ನಡೆಸುವ ಚಿತ್ರಗಳು ಪ್ರಕಟಗೊಂಡಿದ್ದು, ಅಧ್ಯಕ್ಷ ರಾಡ್ರಿಗೊ ಡುಟರ್ಟ್ ಅವರ ಮಾದಕ ದ್ರವ್ಯ ವಿರುದ್ಧದ ಹೋರಾಟದಲ್ಲಿ ಮಾನವಹಕ್ಕುಗಳ ತೀವ್ರ ಉಲ್ಲಂಘನೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತವಾಗಿದೆ.

ಸೆಬು ರಾಜ್ಯದ ಜೈಲೊಂದರ ಕೈದಿಗಳನ್ನು ಮಂಗಳವಾರ ಮುಂಜಾನೆ ಎಬ್ಬಿಸಲಾಯಿತು, ಅವರನ್ನು ಜೈಲಿನ ಎದುರಿನ ಆವರಣದಲ್ಲಿ ಕೂರಿಸಲಾಯಿತು ಹಾಗೂ ಬಟ್ಟೆಗಳನ್ನು ತೆಗೆಯುವಂತೆ ಸೂಚಿಸಲಾಯಿತು. ಈ ಅವಧಿಯಲ್ಲಿ ಮಾದಕ ದ್ರವ್ಯ ನಿಗ್ರಹ ಅಧಿಕಾರಿಗಳು, ಪೊಲೀಸರು ಮತ್ತು ಸೈನಿಕರು ಅವರ ಜೈಲು ಕೋಣೆಗಳಲ್ಲಿ ಶೋಧ ನಡೆಸಿದರು ಎಂದು ಜೈಲಧಿಕಾರಿ ರಫೇಲ್ ಎಸ್ಪಿನ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

ಫಿಲಿಪ್ಪೀನ್ಸ್ ಮಾದಕ ದ್ರವ್ಯ ನಿಗ್ರಹ ಸಂಸ್ಥೆ ಬಿಡುಗಡೆಗೊಳಿಸಿರುವ ಚಿತ್ರಗಳು, ಕೈದಿಗಳು ಬತ್ತಲಾಗಿ ಚಕ್ಕಳ ಬಕ್ಕಳ ಹಾಕಿ ಕುಳಿತುಕೊಂಡಿರುವುದನ್ನು ತೋರಿಸಿವೆ. ಅವರ ಮೇಲೆ ಪ್ರಖರ ಬೆಳಕನ್ನು ಹಾಯಿಸಲಾಗಿತ್ತು ಹಾಗೂ ಸಶಸ್ತ್ರ ಪೊಲೀಸರು ಅವರನ್ನು ಕಾಯುತ್ತಿದ್ದರು.

 ದಾಳಿಯ ವೇಳೆ ಹಲವು ಮೆತಂಫಟಮೈನ್ ಮತ್ತು ಮರಿಜುವಾನ ಎಲೆಗಳ ಪೊಟ್ಟಣಗಳು ಹಾಗೂ ಚೂರಿ ಮತ್ತು ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ ಎಂದು ಮಾದಕ ದ್ರವ್ಯ ನಿಗ್ರಹ ಸಂಸ್ಥೆ ಬಿಡುಗಡೆಗೊಳಿಸಿದ ಹೇಳಿಕೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News