ಪಾಕಿಸ್ತಾನ ಸೃಷ್ಟಿಸಿರುವ ರಾಕ್ಷಸರು ಸೃಷ್ಟಿಸಿದಾತನನ್ನೇ ತಿನ್ನುತ್ತಿದ್ದಾರೆ : ವಿಶ್ವಸಂಸ್ಥೆಗೆ ಭಾರತೀಯ ರಾಯಭಾರಿ

Update: 2017-03-02 16:25 GMT

ಜಿನೇವ, ಮಾ. 2: ಭಾರತದ ವಿರುದ್ಧ ಬಳಸುವುದಕ್ಕಾಗಿ ಪಾಕಿಸ್ತಾನ ಸೃಷ್ಟಿಸಿರುವ ಭಯೋತ್ಪಾದಕ ಸಂಘಟನೆಗಳು ತನ್ನ ಸೃಷ್ಟಿದಾತ ದೇಶವನ್ನೇ ತಿನ್ನುತ್ತಿವೆ ಎಂದು ವಿಶ್ವಸಂಸ್ಥೆಗೆ ಭಾರತದ ರಾಯಭಾರಿ ಅನಿಲ್ ಕುಮಾರ್ ಹೇಳಿದ್ದಾರೆ.

‘‘ಪಾಕಿಸ್ತಾನ ಭಾರತದ ವಿರುದ್ಧ ಭಯೋತ್ಪಾದಕ ಸಂಘಟನೆಗಳನ್ನು ಸೃಷ್ಟಿಸಿತು. ಈ ರಾಕ್ಷಸ ಈಗ ತನ್ನ ಸೃಷ್ಟಿದಾತನನ್ನೇ ಆಪೋಶನ ತೆಗೆದುಕೊಳ್ಳುತ್ತಿದೆ’’ ಅವರು ಹೇಳಿದರು.

ಜಗತ್ತಿನ ಅತ್ಯಂತ ಭಯಾನಕ ಭಯೋತ್ಪಾದಕರು ಕಳೆದ ಎರಡು ದಶಕಗಳಲ್ಲಿ ಪಾಕಿಸ್ತಾನದಲ್ಲಿ ‘‘ಆಶ್ರಯ ಮತ್ತು ಪೋಷಣೆ’’ ಪಡೆದುಕೊಳ್ಳುತ್ತಿದ್ದಾರೆ ಎಂದು ಅನಿಲ್ ಕುಮಾರ್ ಆರೋಪಿಸಿದರು.

ಅವರು ಜಿನೇವದಲ್ಲಿ ನಡೆದ ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಮಿತಿಯ 34ನೆ ಅಧಿವೇಶನದಲ್ಲಿ ಮಾತನಾಡುತ್ತಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಅಕ್ರಮ ನುಸುಳುವಿಕೆ ಮತ್ತು ಗಡಿಯಾಚೆಯ ಭಯೋತ್ಪಾದನೆಗೆ ಬೆಂಬಲ ನೀಡುವ ಮೂಲಕ ಪಾಕಿಸ್ತಾನ ಆ ರಾಜ್ಯದಲ್ಲಿ ಅಸ್ಥಿರತೆಯನ್ನು ಹುಟ್ಟುಹಾಕುತ್ತಿದೆ ಎಂದು ಆರೋಪಿಸಿದ ಅವರು, ಅದು ಹಿಂಸೆಯನ್ನು ಪ್ರಚೋದಿಸುತ್ತಿದೆ, ಬೆಳೆಸುತ್ತಿದೆ ಹಾಗೂ ವೈಭವೀಕರಿಸುತ್ತಿದೆ ಎಂದರು.

ಅದು ‘ಅತಿ ದೊಡ್ಡ ಮಾನವಹಕ್ಕು ಉಲ್ಲಂಘನೆ’ ಎಂದು ಬಣ್ಣಿಸಿದ ಅವರು, ‘ಭಯೋತ್ಪಾದನೆಯ ಜಾಗತಿಕ ಕೇಂದ್ರ ಬಿಂದು’ ಎಂಬ ಪ್ರತಿಷ್ಠೆಯನ್ನು ಪಡೆದುಕೊಂಡಿರುವ ದೇಶವೊಂದು ಮಾನವಹಕ್ಕುಗಳ ಬಗ್ಗೆ ಮಾತನಾಡುತ್ತಿರುವುದು ಕುಚೋದ್ಯವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News