×
Ad

ಮಾದರಿ ಜಿಎಸ್‌ಟಿ ಮಸೂದೆ: ಗರಿಷ್ಠ ಶೇ.20 ತೆರಿಗೆ

Update: 2017-03-02 23:55 IST

ಹೊಸದಿಲ್ಲಿ,ಮಾ.2: ಭವಿಷ್ಯದಲ್ಲಿ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆಗಾಗಿ ಸಂಸತ್ತನ್ನು ಸಂಪರ್ಕಿಸುವ ಅಗತ್ಯವನ್ನು ನಿವಾರಿಸಿಕೊಳ್ಳಲು ಮಾದರಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆಯಲ್ಲಿ ಗರಿಷ್ಠ ತೆರಿಗೆ ಪ್ರಮಾಣವನ್ನು ಈಗಿನ ಶೇ.14ರಿಂದ ಶೇ.20ಕ್ಕೆ ಹೆಚ್ಚಿಸಲು ಜಿಎಸ್‌ಟಿ ಮಂಡಳಿಯು ಉದ್ದೇಶಿಸಿದೆ.

 ಗರಿಷ್ಠ ತೆರಿಗೆ ದರದಲ್ಲಿ ಬದಲಾವಣೆಯು ಕಳೆದ ವರ್ಷ ಒಪ್ಪಿಕೊಳ್ಳಲಾಗಿರುವ ನಾಲ್ಕು ಹಂತಗಳ ಶೇ.5, ಶೇ.12, ಶೇ.18 ಮತ್ತು ಶೇ.28 ತೆರಿಗೆಯ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಆದರೆ ಭವಿಷ್ಯದಲ್ಲಿ ಸಂಭಾವ್ಯ ತೆರಿಗೆ ಹೆಚ್ಚಳಕ್ಕೆ ಅವಕಾಶ ಇರುವಂತಾಗಲು ಗರಿಷ್ಠ ತೆರಿಗೆ ದರವನ್ನು ಹೆಚ್ಚಿಸಲಾಗುತ್ತಿದೆ ಎಂದು ಬಲ್ಲ ಮೂಲಗಳು ತಿಳಿಸಿದವು.
2016, ನವೆಂಬರ್‌ನಲ್ಲಿ ಬಹಿರಂಗಗೊಳಿಸಲಾಗಿರುವ ಮಾದರಿ ಜಿಎಸ್‌ಟಿ ಕಾನೂನಿನ ಪರಿಷ್ಕೃತ ಮಸೂದೆಯು ಗರಿಷ್ಠ ಶೇ.14ರಷ್ಟು ತೆರಿಗೆಯನ್ನು ವಿಧಿಸಲು ಅವಕಾಶ ಕಲ್ಪಿಸಿದೆ. ಕೇಂದ್ರ ಜಿಎಸ್‌ಟಿಯಡಿ ಶೇ.14 ಮತ್ತು ರಾಜ್ಯ ಜಿಎಸ್‌ಟಿಯಡಿ ಶೇ.14, ಹೀಗೆ ಒಟ್ಟು ಗರಿಷ್ಠ ತೆರಿಗೆ ಶೇ.28ರಷ್ಟಾಗುತ್ತದೆ.
 ಪರಿಷ್ಕೃತ ಮಸೂದೆಯಲ್ಲಿನ ಗರಿಷ್ಠ ತೆರಿಗೆ ‘ಶೇ.14 ಮೀರದಂತೆ ’ ಎಂದಿರುವುದನ್ನು ಈಗ ‘ಶೇ.20ನ್ನು ಮೀರದಂತೆ ’ಎಂದು ಬದಲಿಸಲಾಗುತ್ತದೆ ಎಂದು ಮೂಲಗಳು ತಿಳಿಸಿದವು. ಇದರಿಂದಾಗಿ ಭವಿಷ್ಯದಲ್ಲಿ ತೆರಿಗೆಯನ್ನು ಹೆಚ್ಚಿಸುವುದಿದ್ದರೆ ಸಂಸತ್ತಿನ ಒಪ್ಪಿಗೆಯನ್ನು ಪಡೆಯಬೇಕಿಲ್ಲ ಮತ್ತು ಜಿಎಸ್‌ಟಿ ಮಂಡಳಿಯೇ ತೆರಿಗೆಯನ್ನು ಹೆಚ್ಚಿಸಬಹುದಾಗಿದೆ ಎಂದು ಅವು ವಿವರಿಸಿದವು.
ಜಿಎಸ್‌ಟಿಯನ್ನು ಈ ವರ್ಷದ ಜುಲೈ 1ರಿಂದ ಜಾರಿಗೊಳಿಸಲು ನಿರ್ಧರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News