ನಕ್ಸಲರೊಂದಿಗೆ ಗುಂಡಿನ ಕಾಳಗದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗಳ ಸಾವು
Update: 2017-03-03 16:15 IST
ರಾಯಪುರ,ಮಾ.3: ಛತ್ತೀಸ್‌ಗಡದ ಬಿಜಾಪುರ ಜಿಲ್ಲೆಯಲ್ಲಿ ಶುಕ್ರವಾರ ನಕ್ಸಲರೊಂದಿಗಿನ ಗುಂಡಿನ ಕಾಳಗದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗಳು ಕೊಲ್ಲಲ್ಪಟ್ಟಿದ್ದು, ಇತರ ಇಬ್ಬರು ಗಾಯಗೊಂಡಿದ್ದಾರೆ.
ಛತ್ತೀಸ್‌ಗಡ ಸಶಸ್ತ್ರ ಪೊಲೀಸರು ಮತ್ತು ಜಿಲ್ಲಾ ಪೊಲೀಸರ ಜಂಟಿ ಗಸ್ತು ತಂಡವೊಂದು ನಿರ್ಮಾಣ ಹಂತದಲ್ಲಿರುವ ಗಂಗಲೂರ್-ಮರ್ತೂರ್ ರಸ್ತೆ ಸುರಕ್ಷತೆ ಕಾರ್ಯಾಚರಣೆ ನಡೆಸುತ್ತಿದ್ದಾಗ ಚೆರ್ಲಿ ಗ್ರಾಮದ ಬಳಿ ನಕ್ಸಲರು ಗುಂಡಿನ ದಾಳಿ ನಡೆಸಿದ್ದರು. ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ್ದು, ಗುಂಡಿನ ಚಕಮಕಿಯ ಬಳಿಕ ನಕ್ಸಲರು ಪರಾರಿಯಾಗಿದ್ದಾರೆ ಎಂದು ಬಸ್ತರ್ ಐಜಿ ಸುಂದರರಾಜ್ ಪಿ. ಅವರು ಸುದ್ದಿಗಾರರಿಗೆ ತಿಳಿಸಿದರು.
ಹೇಮಂತ ಕುಮಾರ್ ಮತ್ತು ಗಬ್ಬಾರಾಮ್ ಮೃತ ಸಿಬ್ಬಂದಿಗಳಾಗಿದ್ದು, ಗಾಯಾಳು ಗಳಾದ ಸಹದೇವ ರಾಜವಾಡೆ ಮತ್ತು ಮುದ್ದಾರಾಮ್ ಅವರನ್ನು ಆಸ್ಪತ್ರೆಗೆ ದಾಖಲಿಸ ಲಾಗಿದೆ.