×
Ad

ಸೇನೆಯಲ್ಲಿನ ‘ಆರ್ಡರ್ಲಿ ’ವ್ಯವಸ್ಥೆಯನ್ನು ಬಯಲಿಗೆಳೆದಿದ್ದ ಯೋಧ ನಿಗೂಢ ಸಾವು

Update: 2017-03-03 17:54 IST

ಮುಂಬೈ,ಮಾ.3: ಸೇನೆಯಲ್ಲಿರುವ ಬ್ರಿಟಿಷ್ ಕಾಲದ ‘ಸಹಾಯಕ ’ ಅಥವಾ ‘ಆರ್ಡರ್ಲಿ ’ ವ್ಯವಸ್ಥೆಯನ್ನು ಬಯಲಿಗೆಳೆಯಲು ನಾಸಿಕ್‌ನ ಸ್ಥಳೀಯ ಟಿವಿ ಚಾನೆಲ್ಲೊಂದು ನಡೆಸಿದ್ದ ಕುಟುಕು ಕಾರ್ಯಾಚರಣೆಯ ಭಾಗವಾಗಿದ್ದ ಕೇರಳ ಮೂಲದ ಯೋಧನೋರ್ವನ ಶವ ಗುರುವಾರ ಮಹಾರಾಷ್ಟ್ರದ ನಾಸಿಕ್ ಬಳಿಯ ದೇವಲಾಲಿ ದಂಡುಪ್ರದೇಶದಲ್ಲಿನ ಬ್ಯಾರಕ್‌ವೊಂದರಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗನ್ನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಯ್ ಮ್ಯಾಥ್ಯೂ (33) ಕಳೆದ ಶನಿವಾರದಿಂದ ಅನಧಿಕೃತವಾಗಿ ಕರ್ತವ್ಯಕ್ಕೆ ಗೈರುಹಾಜರಾಗಿದ್ದ.

ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಸೇನೆಯು ಹೇಳಿದೆಯಾದರೂ, ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಮ್ಯಾಥ್ಯೂ ಕುಟುಂಬವು ಆತನ ಸಾವಿಗೆ ಕಾರಣವಾದ ಸಂದರ್ಭಗಳ ಕುರಿತು ತನಿಖೆಗೆ ಒತ್ತಾಯಿಸಿದೆ.

ಬಳಕೆಯಲ್ಲಿಲ್ಲದ ಬ್ಯಾರಕ್‌ನಲ್ಲಿ ಮ್ಯಾಥ್ಯೂವಿನ ಕೊಳೆತ ಶವ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕವೇ ಇದು ಆತ್ಮಹತ್ಯೆ ಅಥವಾ ಕೊಲೆ ಎನ್ನುವುದು ನಿರ್ಧಾರವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಶಸ್ತ್ರ ಪಡೆಗಳಲ್ಲಿ ಕಳಪೆ ಕೆಲಸದ ವಾತಾವರಣ ಮತ್ತು ಯೋಧರಿಗೆ ಕಿರುಕುಳ ಕುರಿತು ಸರಣಿ ಆರೋಪಗಳ ನಡುವೆಯೇ ಈ ನಿಗೂಢ ಸಾವು ಬೆಳಕಿಗೆ ಬಂದಿದೆ.

ಸೇನೆಯು ಈ ಕುರಿತು ವಿಚಾರಣೆಗೆ ಆದೇಶಿಸಿದೆ.

      ತಾನು ಱಬಹುದೊಡ್ಡ ತಪ್ಪು ೞ ಮಾಡಿದ್ದೇನೆ ಎಂದು ರವಿವಾರ ಕೇರಳದ ಕೊಲ್ಲಂನಲ್ಲಿಯ ಪತ್ನಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದ ಮ್ಯಾಥ್ಯೂ ಸೋಮವಾರದಿಂದ ನಾಪತ್ತೆಯಾಗಿದ್ದ. ಈ ಱಬಹುದೊಡ್ಡ ತಪ್ಪು ಱಬಹುಶಃ ಆತ ಹಿರಿಯ ಅಧಿಕಾರಿಗಳ ಕಿರುಕುಳ ಕುರಿತಂತೆ ಸ್ಥಳೀಯ ಮರಾಠಿ ಟಿವಿ ವಾಹಿನಿಗೆ ನೀಡಿದ್ದ ಸಂದರ್ಶನಕ್ಕೆ ಸಂಬಂಧಿಸಿತ್ತು ಎಂದು ಶಂಕಿಸಲಾಗಿದೆ. ಈ ಸಂದರ್ಶನ ಸೋಮವಾರ ಪ್ರಸಾರಗೊಂಡಿತ್ತು.

ಮ್ಯಾಥ್ಯೂವಿನ ಗುರುತನ್ನು ರಹಸ್ಯವಾಗಿಡುವುದಾಗಿ ಚಾನೆಲ್ ಭರವಸೆ ನೀಡಿತ್ತಾದರೂ ತನ್ನ ಹಿರಿಯ ಅಧಿಕಾರಿಗಳಿಗೆ ವಿಷಯ ಗೊತ್ತಾಗಿದೆ ಎಂದು ಮ್ಯಾಥ್ಯೂ ಪತ್ನಿ ಫಿನಿ ಮ್ಯಾಥ್ಯೂಗೆ ತಿಳಿಸಿದ್ದ. ರವಿವಾರದ ಕರೆಯ ಬಳಿಕ ಪತಿ ಮತ್ತೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎಂದು ಫಿನಿ ತಿಳಿಸಿದ್ದಾರೆ.

 ಹಿರಿಯ ಅಧಿಕಾರಿಗಳ ಸಹಾಯಕರಾಗಿ ನಿಯೋಜನೆಗೊಳ್ಳುವ ಯೋಧರು ಅವರ ನಾಯಿಗಳನ್ನು ವಾಕಿಂಗ್‌ಗೆ ಕರೆದೊಯ್ಯುವ ಅಥವಾ ಅವರ ಮಕ್ಕಳನ್ನು ಶಾಲೆಗಳಿಗೆ ತಲುಪಿಸುವ ಕೆಲಸಗಳನ್ನು ಮಾಡುತ್ತಿರುವ ವೀಡಿಯೊ ಚಾನೆಲ್‌ನಲ್ಲಿ ಪ್ರಸಾರಗೊಂಡ ನಂತರ ಮ್ಯಾಥ್ಯೂವನ್ನು ಪ್ರಶ್ನಿಸಲಾಗಿತ್ತು ಎಂಬ ವರದಿಗಳನ್ನು ಸೇನಾಮೂಲಗಳು ತಿರಸ್ಕರಿಸಿವೆ.

ಚಾನೆಲ್ ತನ್ನ ಕುಟುಕು ಕಾರ್ಯಾಚರಣೆಯ ವೀಡಿಯೊವನ್ನು ಬಹಿರಂಗ ಗೊಳಿಸಿದಾಗ ಯೋಧ ತನ್ನ ಮುಖಕ್ಕೆ ಮುಸುಕು ಹಾಕಿಕೊಂಡಿದ್ದರಿಂದ ಗುರುತಿಸಲು ಸಾಧ್ಯವಿರಲಿಲ್ಲ, ಆದರೆ ಒತ್ತಡಕ್ಕೆ ಸಿಲುಕಿದ್ದ ಆತ ತನ್ನ ಅಧಿಕಾರಿಗೆ ‘ಕ್ಷಮಿಸಿ ’ಎಂಬ ಒಂದು ಶಬ್ದದ ಎಸ್‌ಎಂಎಸ್ ರವಾನಿಸಿದ್ದ ಎಂದ ಮೂಲಗಳು, ಮ್ಯಾಥ್ಯೂ ಅನಧಿಕೃತ ವಾಗಿ ರಜೆಯಲ್ಲಿ ತೆರಳಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು ಎಂದು ತಿಳಿಸಿವೆ.

 ಚಾನೆಲ್‌ನ ಜಾಲತಾಣದಿಂದ ಈ ವೀಡಿಯೊವನ್ನು ತೆಗೆಯಲಾಗಿದೆ. ಸಹಾಯಕ ರಿಂದ ಮಾಡಿಸುವ ಕ್ಷುಲ್ಲಕ ಕೆಲಸಗಳನ್ನು ಬಣ್ಣಿಸಿ ಇನ್ನೋರ್ವ ಯೋಧ ಲಾನ್ಸ್‌ನಾಯಕ್ ಯಜ್ಞಪ್ರತಾಪ ಸಿಂಗ್ ಅವರು ಯು ಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದ ವೀಡಿಯೊ ಕಳೆದ ಜನವರಿಯಲ್ಲಿ ವೈರಲ್ ಆದ ಬಳಿಕ ಮ್ಯಾಥ್ಯೂ ಸದ್ರಿ ಚಾನೆಲ್‌ನ್ನು ಸಂಪರ್ಕಿಸಿದ್ದ ಎನ್ನಲಾಗಿದೆ.

ಮ್ಯಾಥ್ಯೂ ಚಹರೆಯನ್ನು ಹೋಲುವ ಶವ ಪತ್ತೆಯಾಗಿದ್ದು, ಅದನ್ನು ಮರಣೋತ್ತರ ಪರೀಕ್ಷೆಗಾಗಿ ಅಸ್ಪತ್ರೆಗೆ ಸಾಗಸಲಾಗಿದೆ ಎನ್ನುವುದೊಂದೇ ನಮಗೆ ಸೇನೆಯಿಂದ ಸಿಕ್ಕಿದ್ದ ಮಾಹಿತಿ ಎಂದು ಮೃತ ಯೋಧನ ಸೋದರ ಜಾನ್ ಮ್ಯಾಥ್ಯೂ ತಿಳಿಸಿದರು.

 ಸೇನಾ ಶಿಬಿರದಲ್ಲಿನ ಗುಲಾಮಗಿರಿಯ ಬಗ್ಗೆ ಮ್ಯಾಥ್ಯೂ ಆಗಾಗ್ಗೆ ಪತ್ನಿಯ ಬಳಿ ದೂರಿಕೊಂಡಿದ್ದ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಕೆಳಮಟ್ಟದ ನೌಕರರನ್ನು ಅಧಿಕಾರಿಗಳ ಮನೆಗಳಲ್ಲಿ ಬಲವಂತದಿಂದ ದುಡಿಸಿಕೊಳ್ಳಲಗುತ್ತಿದೆ ಎಂದೂ ಮ್ಯಾಥ್ಯೂ ತಿಳಿಸಿದ್ದ.

 ಱಸಹಾಯಕ ೞ ವ್ಯವಸ್ಥೆಯನ್ನು ನಿಲ್ಲಿಸುವುದಾಗಿ ಸೇನೆಯು ಕಳೆದ ವರ್ಷವೇ ಸ್ಪಷ್ಟಪಡಿಸಿತ್ತಾದರೂ ಅದಿನ್ನೂ ಮುಂದುವರಿದಿದೆ ಎಂದು ಮ್ಯಾಥ್ಯೂ ಹೇಳಿದ್ದ.
ಈ ವಿಷಯದಲಿ ಮಧ್ಯ ಪ್ರವೇಶಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಫಿನಿ ಮ್ಯಾಥ್ಯೂ ಕೋರಿದ್ದಾರೆ.

ಕಳೆದ ವರ್ಷದ ಡಿ.3ರಂದು ಊರಿಗೆ ತೆರಳಿದ್ದ ಮ್ಯಾಥ್ಯೂ ಡಿ.23ರಂದು ನಾಸಿಕ್‌ಗೆ ಮರಳಿದ್ದ. 13 ವರ್ಷಗಳ ಹಿಂದೆ ಸೇನೆಯನ್ನು ಸೇರಿದ್ದ ಆತ ಕಳೆದೊಂದು ವರ್ಷದಿಂದ ನಾಸಿಕ್‌ನಲ್ಲಿ 214 ರಾಕೆಟ್ ರೆಜಿಮೆಂಟ್‌ನಲ್ಲಿ ಗನ್ನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News