×
Ad

ಅಮೆರಿಕದಲ್ಲಿ ಭಾರತೀಯ ಮೂಲದ ಉದ್ಯಮಿಯ ಹತ್ಯೆ

Update: 2017-03-04 13:28 IST

ನ್ಯೂಯಾರ್ಕ್, ಮಾ.4: ಹೈದರಾಬಾದ್ ಮೂಲದ ಇಂಜಿನಿಯರ್ ಒಬ್ಬರನ್ನು ಕಾನ್ಸಾಸ್ ಬಾರ್ ಒಂದರ ಹೊರಗಡೆ ವ್ಯಕ್ತಿಯೊಬ್ಬ ಕಳೆದ ವಾರ ಗುಂಡಿಕ್ಕಿ ಸಾಯಿಸಿದ ಘಟನೆಯ ಆಘಾತದಿಂದ ಭಾರತ ಚೇತರಿಸಿಕೊಳ್ಳುವ ಮೊದಲೇ ಭಾರತೀಯ ಮೂಲದ ಉದ್ಯಮಿಯೊಬ್ಬರನ್ನು ದಕ್ಷಿಣ ಕ್ಯಾರೊಲಿನಾದ ಅವರ ನಿವಾಸದ ಎದುರೇ ಗುರುವಾರ ರಾತ್ರಿ ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ.

ಹರ್ನಿಶ್ ಪಟೇಲ್ ಎಂಬ ಈ ಉದ್ಯಮಿ ರಾತ್ರಿ 11:24ಕ್ಕೆ ತಮ್ಮ ಮಳಿಗೆಯನ್ನು ಮುಚ್ಚಿದ ಹತ್ತು ನಿಮಿಷಗಳೊಳಗೆ ಲಾಂಕಸ್ಟರ್ ನಲ್ಲಿರುವ ಅವರ ನಿವಾಸದ ಎದುರೇ ಅವರನ್ನು ಹತ್ಯೆಗೈಯಲಾಗಿದೆ. ತನಗೆ ಗುಂಡಿನ ಸದ್ದು ಮತ್ತು ಚೀರಾಟ ಕೇಳುತ್ತಿದೆಯೆಂದು ಹತ್ತಿರದ ಮಹಿಳೆಯೊಬ್ಬಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕಾಗಮಿಸುವಷ್ಟರಲ್ಲಿ ಪಟೇಲ್ ಸತ್ತು ಬಿದ್ದಿದ್ದರು. ಸ್ಥಳದಲ್ಲಿ ಎರಡು ಶೆಲ್ ಕೇಸಿಂಗ್ ಪತ್ತೆಯಾಗಿವೆ.

ಹೈದರಾಬಾದ್ ಮೂಲದ ಇಂಜಿನಿಯರ್ ಶ್ರೀನಿವಾಸ್ ಕುಚಿಭೊತ್ಲ ಅವರ ಹತ್ಯೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಖಂಡಿಸಿದ ಎರಡೇ ದಿನಗಳಲ್ಲಿ ಈ ಹತ್ಯೆ ನಡೆದಿದೆ.

ಇದೊಂದು ಜನಾಂಗೀಯ ದ್ವೇಷದಿಂದ ನಡೆದ ಕೊಲೆಯೆಂದು ತಿಳಿಯಲು ಯಾವುದೇ ಕಾರಣವಿಲ್ಲ ಎಂದು ಸ್ಥಳೀಯ ತನಿಖಾಧಿಕಾರಿಗಳು ಹೇಳಿಕೊಂಡಿದ್ದಾರೆ. ಪಟೇಲ್ ಅವರ ಹತ್ಯೆ ಲಾಂಕಸ್ಟರ್ ನಲ್ಲಿ ಸಾಕಷ್ಟು ಆಕ್ರೋಶ ಮೂಡಿಸಿದೆಯೆಂದು ಹೇಳಲಾಗಿದೆ. ಅವರ ಮಾಲಕತ್ವದ ಸ್ಟೋರ್ ನಗರದ ಶೆರಿಫ್ ಕಚೇರಿಯ ಸಮೀಪವೇ ಇದ್ದು, ಅವರ ಸಹಾಯಕರು ಆಗಾಗ ಪಟೇಲ್ ಅಂಗಡಿಗೆ ಬರುತ್ತಿದ್ದರು. ಅವರೊಬ್ಬರು ಸ್ನೇಹ ಜೀವಿ, ಹಣವಿಲ್ಲದವರಿಗೂ ಅವರು ಆಹಾರವೊದಗಿಸುತ್ತಿದ್ದರು ಎಂದು ಹಲವರು ಹೇಳಿದ್ದಾರೆ. ಪಟೇಲ್ ಅವರು ತಮ್ಮ ಪತ್ನಿ ಹಾಗೂ ಪ್ರಾಥಮಿಕ ಶಾಲೆಗೆ ಹೋಗುವ ಮಗುವನ್ನು ಅಗಲಿದ್ದಾರೆ. ಘಟನೆ ನಡೆದಾಗ ಪಟೇಲ್ ಅವರ ಪತ್ನಿ ಮತ್ತು ಮಗು ಮನೆಯಲ್ಲಿಯೇ ಇದ್ದರು.

ಪಟೇಲ್ ಅವರ ಸ್ಪೀಡ್ ಸ್ಮಾರ್ಟ್ ಸ್ಟೋರ್ ಹೊರಗಡೆ ಹಲವಾರು ಜನರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದು, ಹೂವುಗಳನ್ನಿಟ್ಟು ಅವರಿಗೆ ಗೌರವ ಸಲ್ಲಿಸುತ್ತಿದ್ದಾರೆ. ‘‘ಸ್ಟೋರ್ ಕ್ಲೋಸ್ಡ್ ಫಾರ್ ಫ್ಯೂ ಡೇಸ್ ಬಿಕಾಸ್ ಆಫ್ ಫ್ಯಾಮಿಲಿ ಎಮರ್ಜನ್ಸಿ. ಸಾರಿ ಫಾರ್ ಇನ್ ಕನ್ವೀನಯನ್ಸ್’ ಎಂಬ ಬೋರ್ಡನ್ನು ಮುಚ್ಚಿರುವ ಮಳಿಗೆಯೆದುರು ಅಳವಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News