ಪ್ರತಿಭಟನಾಕಾರರ ಕಲ್ಲುತೂರಾಟದ ನಡುವೆಯೇ ಎನ್‌ಕೌಂಟರ್ ಆರಂಭ
Update: 2017-03-04 14:23 IST
ಶ್ರೀನಗರ,ಮಾ.4: ದಕ್ಷಿಣ ಕಾಶ್ಮೀರದ ಶೋಪಿಯಾನ್‌ನ ಚಿಲ್ಲಿಪೋರಾ ಗ್ರಾಮದಲ್ಲಿ ಇಂದು ಬೆಳಿಗ್ಗೆ ಪ್ರತಿಭಟನಾಕಾರರಿಂದ ಕಲ್ಲುತೂರಾಟದ ನಡುವೆಯೇ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ಆರಂಭಗೊಂಡಿದೆ.
ಚಿಲ್ಲಿಪೋರಾ ಗ್ರಾಮದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿಗಳು ಶುಕ್ರವಾರ ರಾತ್ರಿಯೇ ಆ ಪ್ರದೇಶವನ್ನು ನಿರ್ಬಂಧಿಸಿದ್ದರು. ಆದರೆ ಗುಂಡಿನ ದಾಳಿ ನಡೆಸಲು ಬೆಳಗಿನವರೆಗೆ ಕಾದಿದ್ದರು.
ಆದರೆ ಉಗ್ರರ ರಕ್ಷಣೆಗೆ ಮುಂದಾದ ಗ್ರಾಮಸ್ಥರು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ಆರಂಭಿಸಿದ್ದು, ಇದರ ನಡುವೆಯೇ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡು ಹಾರಾಟ ಆರಂಭಗೊಂಡಿತು. ನೂರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾ ಕಾರರನ್ನು ಅಶ್ರುವಾಯು ಪ್ರಯೋಗಿಸಿ ಸ್ಥಳದಿಂದ ಚದುರಿಸಲಾಗಿದೆ.