ಜಾಣತನ ಮೆರೆಯಲು ಹೋಗಿ, ಅಜ್ಞಾನ ಪ್ರದರ್ಶಿಸಿದ ಮೋದಿ...
ಮಾನ್ಯರೆ,
ಮೋದಿಯವರು ಹೋದಲ್ಲೆಲ್ಲಾ ಅತೀ ಜಾಣತನ ತೋರಲು ಹೋಗಿ ತಮ್ಮ ಭಾಷಣದಲ್ಲಿ ಏನಾದರೊಂದು ಎಡವಟ್ಟು ಮಾಡಿ ಬೆಪ್ಪರಾಗುವುದು ನಡೆಯುತ್ತಲೇ ಇದೆ. ಇತ್ತೀಚೆಗೆ ಉತ್ತರ ಪ್ರದೇಶದ ಚುನಾವಣಾ ಪ್ರಚಾರದ ವೇಳೆ ಹಿಂದಿನ ಒಂದೂವರೆ ತಿಂಗಳಿನಿಂದ ವಿರೋಧ ಪಕ್ಷದವರನ್ನು ಲೇವಡಿ ಮಾಡಲು ಹೋಗಿ ತಾವೇ ಗೇಲಿಗೊಳಗಾಗಿ ಪೆದ್ದರಾಗ ಬೇಕಾಯಿತು. ಕೇವಲ ಮಾಯಾವತಿ ಒಬ್ಬರೇ ತನ್ನ ಭಾಷಣವನ್ನು ಮೊದಲೇ ನೀಟಾಗಿ ಬರೆದು ತಂದು ಅದನ್ನು ಓದುತ್ತಾರೆ. ಹಾಗಾಗಿ ಅವರ ಭಾಷಣದಲ್ಲಿ ಪ್ರಮಾದಗಳಾಗಿಲ್ಲ. ಎರಡು ದಿನಗಳ ಹಿಂದೆ ರಾಹುಲ್ ಗಾಂಧಿ ಮಣಿಪುರದಲ್ಲಿ ಭಾಷಣ ಮಾಡುತ್ತಾ ಮಣಿಪುರದಲ್ಲಿ ಕಿತ್ತಳೆ ಹಣ್ಣಿನ ರಸದ (ನಾರಂಗಿ ರಸ್) ಉದ್ಯಮಗಳನ್ನು ತಮ್ಮ ಸರಕಾರ ಸ್ಥಾಪಿಸಲು ಉದ್ದೇಶಿಸಿದೆ ಎಂದು ಹೇಳಿದ್ದು ನಿಜ. ಆದರೆ ಮೋದಿಯವರು ಉತ್ತರ ಪ್ರದೇಶದಲ್ಲಿ ಭಾಷಣ ಮಾಡುತ್ತಾ ರಾಹುಲ್ ಗಾಂಧಿ ಮಣಿಪುರದಲ್ಲಿ ತೆಂಗಿನ ರಸ (ನಾರಿಯಲ್ ರಸ್) ಉದ್ಯಮ ಸ್ಥಾಪಿಸುತ್ತಾರಂತೆ! ಅವರಿಗೆ ತೆಂಗಿನ ಒಳಗೆ ರಸ ಇರುವುದಿಲ್ಲ ಅದರಲ್ಲಿ ಇರುವುದು ನೀರು ಎಂದು ಸಹಾ ಗೊತ್ತಿಲ್ಲ ಎಂದು ರಾಹುಲ್‌ರನ್ನು ಲೇವಡಿ ಮಾಡಿದರು. ಇದಕ್ಕೆ ಪ್ರತ್ಯುತ್ತರವಾಗಿ ಕಾಂಗ್ರೆಸ್ ರಾಹುಲ್ ಗಾಂಧಿ ‘ನಾರಂಗಿ ರಸ್’ ಎಂದು ಹೇಳಿದ್ದಾರೆಯೇ ಹೊರತು ‘ನಾರಿಯಲ್ ರಸ್’ ಎಂದು ಹೇಳಿಲ್ಲ ಎಂಬುದನ್ನು ರಾಹುಲ್ ಗಾಂಧಿ ಮಣಿಪುರದಲ್ಲಿ ಭಾಷಣ ಮಾಡಿದ ವೀಡಿಯೊ ಬಿಡುಗಡೆ ಮಾಡಿ ಸಾಬೀತು ಪಡಿಸಿದರು. ಇದರಿಂದ ಮೋದಿ ಜಾಣತನ ತೋರಿಸಲು ಹೋಗಿ ತಾವೇ ಎಡವಿದರು.
ಇಲ್ಲಿ ಮುಖ್ಯ ವಿಷಯವೇನೆಂದರೆ ಕಿತ್ತಳೆ ರಸ ಅನ್ನುವ ಬದಲು ತೆಂಗಿನಕಾಯಿ ರಸ ಎಂದು ನಿಜವಾಗಿ ರಾಹುಲ್ ಗಾಂಧಿ ಹೇಳಿದ್ದರೂ ಅದು ತಪ್ಪಾಗುತ್ತಿರಲಿಲ್ಲ. ಅವರು ಒಂದು ವೇಳೆ ತೆಂಗಿನಕಾಯಿ ‘ನೀರು’ ಅನ್ನುವ ಬದಲು ತೆಂಗಿನಕಾಯಿ ‘ರಸ’ ಎಂದಿದ್ದರೂ ಅದರಲ್ಲಿ ತಪ್ಪಿಲ್ಲ. ಯಾಕೆಂದರೆ ಕರಾವಳಿ ಪ್ರದೇಶದಲ್ಲಿ ತೆಂಗಿನ ಕಾಯಿಯ ಒಳಗಿನ ಬಿಳಿ ಭಾಗವನ್ನು ಹೆರೆದು ತೆಗೆದು ಅದನ್ನು ಮಿಕ್ಸಿಯಲ್ಲಿ ನುಣ್ಣಗೆ ಕಡೆದು ನಂತರ ಅದನ್ನು ತೆಳು ಬಟ್ಟೆಯಲ್ಲಿ ಹಾಕಿ ಹಿಂಡಿ ಅದರಿಂದ ಬಿಳಿ ರಸ ತೆಗೆಯುತ್ತಾರೆ. ಇದಕ್ಕೆ ‘ತೆಂಗಿನ ಹಾಲು’ ಎಂದು ಕರೆಯುತ್ತಾರೆ. ಈ ತೆಂಗಿನ ಹಾಲನ್ನು ಸಸ್ಯಾಹಾರ ಮತ್ತು ಮಾಂಸಾಹಾರ ಎರಡರಲ್ಲೂ ಮಿಶ್ರಣ ಮಾಡುತ್ತಾರೆ. ಈ ತೆಂಗಿನ ಹಾಲನ್ನು ಬೆಂಗಳೂರು ಮುಂಬೈಯಲ್ಲಿ 5 ಸ್ಟಾರ್ ಹೋಟೆಲುಗಳಲ್ಲೂ ಬಳಸುತ್ತಾರೆ. ಇದರಿಂದ ಪದಾರ್ಥಗಳಿಗೆ ವಿಶೇಷ (ಸಿಹಿ) ರುಚಿ ಬರುತ್ತದೆ. ಅಷ್ಟೇ ಅಲ್ಲ ತೆಂಗಿನ ಈ ಹಾಲನ್ನು ದೋಸೆಯ ಹಿಟ್ಟಿನ ಜತೆ ಮಿಶ್ರಣ ಮಾಡಿದರೂ ಅದರಿಂದ ದೋಸೆಗೆ ವಿಶಿಷ್ಟ ರುಚಿ ಬರುತ್ತದೆ. ಮುಂಬೈಯಲ್ಲಿ ನಮ್ಮ ಕರಾವಳಿ ಮೂಲದ ನ್ಯಾಚುರಲ್ಸ್ ಎಂಬ ಐಸ್ ಕ್ರೀಂ ತಯಾರಕರು ತೆಂಗಿನ ಹಾಲನ್ನು ತಮ್ಮ ಐಸ್ ಕ್ರೀಂ ತಯಾರಿಕೆಯಲ್ಲೂ ಬಳಸಿ ಹೊಸ ಫ್ಲೇವರ್ ಕಂಡು ಹಿಡಿದು ಹತ್ತು ವರ್ಷದ ಹಿಂದೆಯೇ ಯಶಸ್ವಿಯಾಗಿದ್ದಾರೆ. ದುಬೈಯಲ್ಲಿ ಅಲ್ಲಿಯ ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳಲ್ಲಿ ತೆಂಗಿನ ಕಾಯಿಯ ಎಳೆನೀರು ಮತ್ತು ತೆಂಗಿನಕಾಯಿಯ ಹಾಲು ಇವೆರಡೂ ಬೇರೆ ಬೇರೆ ಟೆಟ್ರಾ ಪ್ಯಾಕ್‌ನಲ್ಲಿ ಲಭ್ಯವಿರುವುದು ಅಲ್ಲಿಗೆ ಹೋಗಿದ್ದಾಗ ನಾನು ನೋಡಿದ್ದೇನೆ. ಹಾಗಿರುವಾಗ ರಾಹುಲ್ ಗಾಂಧಿ ತೆಂಗಿನ ನೀರು ಅನ್ನುವ ಬದಲು ತೆಂಗಿನ ರಸ ಎಂದು ಹೇಳಿದ್ದರೂ ಅದರಲ್ಲಿ ತಪ್ಪಿಲ್ಲ. ರಾಹುಲ್ ಗಾಂಧಿಯನ್ನು ಮೋದಿಯವರು ಲೇವಡಿ ಮಾಡುವ ಭರದಲ್ಲಿ ಅವರು ತಮ್ಮ ಸ್ವಂತ ಅಜ್ಞಾನ ಪ್ರದರ್ಶಿಸಿದ್ದನ್ನು ಗಮನಿಸಿ, ಅವರ ಪ್ರಕಾರ ತೆಂಗು ಕೇವಲ ಕೇರಳದಲ್ಲಿ ಮಾತ್ರ ಬೆಳೆಯುತ್ತದಂತೆ. ಹಾಗಾದರೆ ನಮ್ಮ ಕರ್ನಾಟಕದ ಕರಾವಳಿಯಲ್ಲಿ, ಜತೆಗೆ ಗೋವಾ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಕರಾವಳಿಗಳಲ್ಲೂ ತೆಂಗು ಬೆಳೆಯುವುದು ಈ ದೇಶದ ಪ್ರಧಾನ ಸೇವಕನಿಗೇ ಗೊತ್ತಿಲ್ಲ!