ಕನಿಷ್ಠ ಬ್ಯಾಲೆನ್ಸ್‌ ಹೊಂದಿರದ ಖಾತೆದಾರರಿಗೆ ಎಸ್ ಬಿಐ ದಂಡ !

Update: 2017-03-06 08:38 GMT

ಹೊಸದಿಲ್ಲಿ, ಮಾ.6: ನಿಮ್ಮ ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾದ  ಉಳಿತಾಯ ಖಾತೆಯಲ್ಲಿ ನಿಗದಿಪಡಿಸಿದ ಮೊತ್ತಕ್ಕೂ ಕಡಿಮೆ ಹಣವಿದ್ದರೆ ಇನ್ನು ಮುಂದೆ ನೀವು ದಂಡ ಕಟ್ಟಬೇಕಾಗುತ್ತದೆ. ಇದರ ಜೊತೆಗೆ ಎಸ್‌ಬಿಐ ಎಟಿಎಂ ಸೇರಿದಂತೆ ವಿವಿಧ ಸೇವಾ ಶುಲ್ಕವನ್ನು ಪರಿಷ್ಕರಿಸಿದೆ. 

ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್‌ ಕಾಯ್ದುಕೊಳ್ಳದ ಖಾತೆದಾರರಿಗೆ ದಂಡ ವಿಧಿಸುವ ನಿಯಮವನ್ನು   ಎಸ್ ಬಿಐ ಐದು ವರ್ಷಗಳ ಬಳಿಕ ಮತ್ತೆ ಜಾರಿಗೆ ತರುತ್ತಿದೆ. ಬ್ಯಾಂಕ್‌ ಖಾತೆಯಲ್ಲಿ ನಿಗದಿ ಪಡಿಸಿದ ಮೊತ್ತಕ್ಕೂ ಕಡಿಮೆ ಬ್ಯಾಲೆನ್ಸ್‌ ಇದ್ದರೆ ದಂಡ ವಿಧಿಸುವ  ನಿರ್ಧಾರಕ್ಕೆ   ಆರ್ ಬಿಐ ಅನುಮತಿ ನೀಡಿದೆ. ಎಸ್ ಬಿಐನ ನೂತನ ನಿಯಮ ಎಪ್ರಿಲ್‌ 1ರಿಂದ ಜಾರಿಗೆ ಬರಲಿದೆ.

ಐದು ವರ್ಷಗಳ ಹಿಂದೆ ಅಂದರೆ 2012ರಲ್ಲಿ ಹೊಸ ಗ್ರಾಹಕರನ್ನು ಆಕರ್ಷಿಸುವ ಉದ್ದೇಶಕ್ಕಾಗಿ ಎಸ್ ಬಿಐ ಕನಿಷ್ಠ ಬ್ಯಾಲೆನ್ಸ್‌ ಕಾಯ್ದುಕೊಳ್ಳದ ಖಾತೆದಾರಿಗೆ ದಂಡ ವಿಧಿಸುವ ನಿಯಮವನ್ನು ವಾಪಸ್‌ ಪಡೆದಿತ್ತು.

ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ತಿಂಗಳಿಗೆ ಮೂರು ಬಾರಿ ನಗದು ಹಣ ಜಮೆ ಮಾಡುವುದಕ್ಕೆ ಶುಲ್ಕ ಇಲ್ಲ. ಆದರೆ ಈ ಮಿತಿಯನ್ನು ಮೀರಿ ಜಮೆ ಮಾಡುವ ಗ್ರಾಹಕರು ಪ್ರತಿ ಬಾರಿ ಜಮೆ ಮಾಡುವಾಗ 50 ರೂ. ಲೆವಿ ಮತ್ತು ಸೇವಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಒಂದು ವೇಳೆ ನಿಮ್ಮದು ಚಾಲ್ತಿ ಖಾತೆಯಾಗಿದ್ದರೆ ಶುಲ್ಕದ ಮೊತ್ತ ಜಾಸ್ತಿಯಾಗಲಿದೆ. 

ಕನಿಷ್ಠ ಬ್ಯಾಲೆನ್ಸ್ ಮಿತಿ

ಮೆಟ್ರೋ ಪಾಲಿಟನ್‌  ನಗರಗಳಲ್ಲಿನ ಖಾತೆದಾರರು  5 ಸಾವಿರ ರೂ. ಕನಿಷ್ಠ ಬ್ಯಾಂಕ್‌ ಬ್ಯಾಲೆನ್ಸ್‌ಹೊಂದಿರಬೇಕು.  ಕನಿಷ್ಠ ಬ್ಯಾಲೆನ್ಸ್‌ ಗಿಂತಲೂ ಶೇ 75ರಷ್ಟು ಕಡಿಮೆಯಾದರೆ 100 ರೂ. ಮತ್ತು ಸೇವಾ ತೆರಿಗೆ. ಶೇ 50ರಷ್ಟು ಕಡಿಮೆ ಇದ್ದರೆ 50  ರೂ .  ಮತ್ತು ಸೇವಾ ತೆರಿಗೆ ವಿಧಿಸಲಾಗುತ್ತದೆ.
ನಗರ ಪ್ರದೇಶಗಳಲ್ಲಿ 3 ಸಾವಿರ ರೂ., ತಾಲೂಕು ಮಟ್ಟದಲ್ಲಿ 2 ಸಾವಿರ ರೂ. ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಖಾತೆಗಳಲ್ಲಿ 1 ಸಾವಿರ ರೂ. ಕನಿಷ್ಠ ಬ್ಯಾಲೆನ್ಸ್‌ ಹೊಂದಿರಬೇಕು. . ಇಲ್ಲವಾದಲ್ಲಿ ಖಾತೆದಾರರಿಗೆ ದಂಡದ ರೂಪದಲ್ಲಿ ಸೇವಾ ತೆರಿಗೆ ವಿಧಿಸಲಾಗುವುದು. ಲಕ್ಷಾಂತರ ಉಳಿತಾಯ ಖಾತೆಗಳು ಶೂನ್ಯ ಮೊತ್ತ ಹೊಂದಿರುವುದರಿಂದ ಅವುಗಳಿಗೆ ಮರುಚಾಲನೆ ನೀಡುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್​ಬಿಐ ಅಧಿಕಾರಿಗಳು  ಮಾಹಿತಿ ನೀಡಿದ್ದಾರೆ.
 

ಐದು ಬಾರಿ ವಿಥ್ ಡ್ರಾ ಮಾಡಿದರೆ ಶುಲ್ಕ ಇಲ್ಲ
-ಎಸ್ ಬಿಐನ ಎಟಿಎಂನಲ್ಲಿ ಬ್ಯಾಂಕ್‌ ಖಾತೆದಾರರು 5  ಬಾರಿ ಹಣ ವಿಥ್‌  ಡ್ರಾ ಮಾಡಿದರೆ ಸೇವಾ ಶುಲ್ಕ ಇಲ್ಲ. ಅದಕ್ಕಿಂತ ಹೆಚ್ಚು ಬಾರಿ ಹಣ ವಿಥ್ ಮಾಡಿದರೆ  ಶುಲ್ಕ 10 ರೂ.
-ಇತರ ಬ್ಯಾಂಕ್‌ ಎಟಿಎಂಗಳಲ್ಲಿ ೩ಕ್ಕಿಂತ ಹೆಚ್ಚು ಬಾರಿ ಹಣ ವಿಥ್ ಡ್ರಾ ಮಾಡಿದರೆ ಶುಲ್ಕ 20 ರೂ.
-ಕನಿಷ್ಠ 25 ಸಾವಿರ ರೂ. ಬ್ಯಾಲೆನ್ಸ್‌ ಉಳಿಸಿಕೊಂಡರೆ ಎಸ್ ಬಿಐ ನ ಎಟಿಎಂನಿಂದ ಎಷ್ಟು ಬಾರಿ ಬೇಕಾದರೂ ಹಣ ಹಿಂಪಡೆಯಬಹುದು.
-ಖಾತೆಯಲ್ಲಿ 1 ಲಕ್ಷ ರೂ ಕನಿಷ್ಠ ಬ್ಯಾಲೆನ್ಸ್ ಉಳಿಸಿಕೊಂಡರೆ ಇತರ ಬ್ಯಾಂಕ್‌ ಗಳ ಎಟಿಎಂನಿಂದ ಎಷ್ಟು ಬಾರಿ ಬೇಕಾದರೂ ಹಣ ಪಡೆಯಬಹುದು. ಇದಕ್ಕೆ ಶುಲ್ಕ ಹಾಕುವಂತಿಲ್ಲ.

ಎಸ್‌ಎಂಎಸ್‌ ಗೆ ಶುಲ್ಕ
ಎಸ್ ಎಂಎಸ್‌ ಅಲರ್ಟ್‌‌ಗಳಿಗೆ 15 ರೂ .ಶುಲ್ಕ ವಿಧಿಸಲಾಗುವುದು.
* ಮೂರು ತಿಂಗಳ ಅವಧಿಯಲ್ಲಿ ಸರಾಸರಿ 25,000 ರೂ. ಬ್ಯಾಲೆನ್ಸ್‌ ಕಾಯ್ದುಕೊಂಡಿರುವ ಡೆಬಿಟ್ ಕಾರ್ಡ್‌ ಬಳಕೆದಾರರಿಗೆ ಎಸ್‌ಎಂಎಸ್ ಅಲರ್ಟ್‌ ಸೇವೆಗೆ ಮೂರು ತಿಂಗಳಿಗೆ 15 ರೂ ಶುಲ್ಕ.
* 1 ಸಾವಿರ ರೂ. ತನಕದ ಯಪಿಐ ಮತ್ತು ಯುಎಸ್ ಎಸ್ ಡಿ ವ್ಯವಹಾರಗಳಿಗೆ ಎಸ್ ಬಿಐ ಶುಲ್ಕ ವಿನಾಯತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News