×
Ad

ಪ್ರಧಾನಿಯ ವಿಮಾನವನ್ನೇ ಇಳಿಯಲು ಬಿಡುವುದಿಲ್ಲ ಎಂದು ಈ ಬಿಜೆಪಿ ಶಾಸಕ ಬೆದರಿಕೆ ಹಾಕಿದ್ದೇಕೆ ?

Update: 2017-03-06 15:41 IST

ಕೋಟಾ(ರಾಜಸ್ಥಾನ),ಮಾ.6: ನಗರಕ್ಕೆ ವಾಯುಸಂಪರ್ಕದ ಕೊರತೆಯ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿರುವ ಕೋಟಾ ಜಿಲ್ಲೆಯ ಲಾಡಪುರ ಬಿಜೆಪಿ ಶಾಸಕ ಭವಾನಿ ಸಿಂಗ್ ರಾಜಾವತ್ ಅವರು, ಪ್ರಧಾನಿ ಸೇರಿದಂತೆ ಯಾವುದೇ ವಿಐಪಿಗಳ ವಿಮಾನ ಕೋಟಾದಲ್ಲಿ ಇಳಿಯಲು ಅವಕಾಶ ನೀಡುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದಾರೆ.

ರವಿವಾರ ಇಲ್ಲಿ ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಉದ್ಘಾಟನೆ ಸಂದರ್ಭ ಮಾತನಾಡುತ್ತಿದ್ದ ಅವರು, ನಗರದ ವಿಮಾನ ನಿಲ್ದಾಣದಿಂದ ಯಾವುದೇ ವಿಮಾನಯಾನವಿಲ್ಲದಿದ್ದರೆ ಪಾಸ್‌ಪೋರ್ಟ್ ಪಡೆದುಕೊಂಡು ಏನು ಮಾಡುತ್ತೀರಿ ಎಂದು ಜನರನ್ನು ಪ್ರಶ್ನಿಸಿದರು.

ಇಲ್ಲಿ ರಾಜಕೀಯ ನಾಯಕರ ಸಣ್ಣ ವಿಮಾನಗಳು ಮಾತ್ರ ಇಳಿಯಬಹುದಾಗಿವೆ, ಹೀಗಾಗಿ ಕೋಟಾ ವಿಮಾನ ನಿಲ್ದಾಣವು ರಾಜಕೀಯ ನಾಯಕರಿಗೆ ಮೀಸಲಾಗಿರು ವಂತಿದೆಯೇ ಹೊರತು ಜನರಿಗಾಗಿ ಅಲ್ಲ ಎಂದು ಹೇಳಿದ ಅವರು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯಾವುದೇ ವಿಐಪಿಗಳ ವಿಮಾನ ಇಲ್ಲಿ ಇಳಿಯಲು ಅವಕಾಶ ನೀಡದಿರುವ ನಿರ್ಧಾರ ಕೈಗೊಳ್ಳೋಣ ಎಂದರು.

ಕೋಟಾದಲ್ಲಿ ನೂತನ ವಿಮಾನ ನಿಲ್ದಾಣ ಸ್ಥಾಪನೆಗೆ ಪ್ರಧಾನಿಯನ್ನು ಆಗ್ರಹಿಸುವಂತೆ ಕೋಟಾ ಸಂಸದ ಓಂ ಬಿರ್ಲಾ ಅವರನ್ನು ಆಗ್ರಹಿಸಿದ ರಾಜಾವತ್, ತನ್ನ ಬೇಡಿಕೆಯನ್ನು ಪ್ರಧಾನಿ ಒಪ್ಪದಿದ್ದರೆ ಬಿರ್ಲಾ ಅವರು ಧರಣಿ ಸತ್ಯಾಗ್ರಹ ನಡೆಸಬೇಕು ಎಂದರು.

 ತನ್ನ ಕ್ಷೇತ್ರದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗುವಂತೆ ಮಾಡಿರುವುದಕ್ಕಾಗಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸಚಿನ ಪೈಲಟ್‌ರನ್ನು ಸಿಕ್ಕಾಪಟ್ಟೆ ಹೊಗಳಿದ ರಾಜಾವತ್, ಅವರು ಬೇರೆ ರಾಜಕೀಯ ಪಕ್ಷಕೆ ಸೇರಿದವರಾಗಿದ್ದರೂ ಅಜ್ಮೇರ್ ಸಂಸದರಾಗಿ ಅವರ ಅಧಿಕಾರಾವಧಿಯಲ್ಲಿ ಜಿಲ್ಲೆಯ ಸಣ್ಣಪಟ್ಟಣ ಕೃಷ್ಣಗಡವು ವಿಮಾನ ನಿಲ್ದಾಣ ಪಡೆದು ಕೊಂಡಿರುವುದನ್ನು ನಾನು ಪ್ರಶಂಸಿಸುತ್ತೇನೆ ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಬಿರ್ಲಾ ಮೋದಿ ಸರಕಾರದ ಅವಧಿಯಲ್ಲೇ ನೂತನ ವಿಮಾನ ನಿಲ್ದಾಣಕ್ಕೆ ಶಿಲಾನ್ಯಾಸ ನೆರವೇರಲಿದೆ ಮತ್ತು 2018ರಿಂದ ಈಗಿನ ನಿಲ್ದಾಣದಿಂದ ಯಾನಗಳು ಆರಂಭವಾಗಲಿವೆ ಎಂದು ಭರವಸೆ ನೀಡಿದರು.

ಸೌಲಭ್ಯಗಳ ಕೊರತೆಯಿಂದಾಗಿ 1994ರಲ್ಲಿ ಕೋಟಾ ವಿಮಾನ ನಿಲ್ದಾಣದಿಂದ ವಿಮಾನ ಯಾನಗಳನ್ನು ನಿಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News