ಸಿಖ್ ಮೇಲೆ ದಾಳಿ: ತನಿಖೆಯಲ್ಲಿ ಕೈಜೋಡಿಸಿದ ಎಫ್‌ಬಿಐ

Update: 2017-03-06 15:02 GMT

ವಾಶಿಂಗ್ಟನ್, ಮಾ. 6: ಭಾರತ ಮೂಲದ ಸಿಖ್ ವ್ಯಕ್ತಿ ದೀಪ್ ರೈ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣದ ತನಿಖೆಯಲ್ಲಿ ಎಫ್‌ಬಿಐ ಕೈಜೋಡಿಸಿದೆ. ಅದೇ ವೇಳೆ, ದ್ವೇಷಾಪರಾಧ ಪ್ರಕರಣಗಳಲ್ಲಿ ‘ಕ್ಷಿಪ್ರ ನ್ಯಾಯ’ವನ್ನು ಒದಗಿಸಲಾಗುವುದು ಎಂದು ಅಮೆರಿಕ ಭಾರತಕ್ಕೆ ಭರವಸೆ ನೀಡಿದೆ.

ದೀಪ್ ರೈ ಮೇಲೆ ವಾಶಿಂಗ್ಟನ್‌ನ ಕೆಂಟ್‌ನಲ್ಲಿರುವ ಅವರ ಮನೆಯ ಹೊರಗೆ ಮುಖವನ್ನು ಅರ್ಧ ಮುಚ್ಚಿಕೊಂಡಿದ್ದ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದ. ‘‘ನಿನ್ನ ದೇಶಕ್ಕೆ ವಾಪಸ್ ಹೋಗು’’ ಎಂಬುದಾಗಿ ಗುಂಡು ಹಾರಿಸುವ ಮೊದಲು ಆತ ಕಿರುಚಿದ್ದ.

ಈ ಪ್ರಕರಣವನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಸಂಭಾವ್ಯ ದ್ವೇಷ ಕಾರಣಕ್ಕಾಗಿ ನಡೆದ ಅಪರಾಧ ಎಂಬುದಾಗಿ ತನಿಖೆ ನಡೆಸುತ್ತಿದೆ.

‘‘ಗುಂಡು ಹಾರಾಟ ಪ್ರಕರಣದ ತನಿಖೆಯಲ್ಲಿ ಸಿಯಾಟಲ್ ಎಫ್‌ಬಿಐ ಕೆಂಟ್ ಪೊಲಿಸ್ ಇಲಾಖೆಗೆ ನೆರವು ನೀಡುತ್ತಿದೆ’’ ಎಂದು ಎಫ್‌ಬಿಐ ಸಿಯಾಟಲ್ ವಕ್ತಾರೆ ಆಯ್ನಾ ಡೈಟ್ರಿಕ್ ತಿಳಿಸಿದರು.

ಹೆಚ್ಚುತ್ತಿರುವ ದ್ವೇಷಾಪರಾಧ: ಅಮಿತ್ ಬೇರಾ

ವಾಶಿಂಗ್ಟನ್, ಮಾ. 6: ಭಾರತೀಯ ಮೂಲದ ಸಿಖ್ ವ್ಯಕ್ತಿಯ ಮೇಲೆ ಕೆಂಟ್‌ನಲ್ಲಿ ನಡೆದ ಗುಂಡಿನ ದಾಳಿಯನ್ನು ಭಾರತೀಯ ಅಮೆರಿಕನ್ ಕಾಂಗ್ರೆಸಿಗ ಅಮಿತ್ ಬೇರಾ ಖಂಡಿಸಿದ್ದಾರೆ.

‘‘ಈ ದಾಳಿಯು ವಲಸಿಗರ ದೇಶವೆಂಬ ನಮ್ಮ ಹೆಗ್ಗಳಿಕೆಗೆ ವಿರುದ್ಧವಾಗಿದೆ’’ ಎಂದು ಹೇಳಿಕೆಯೊಂದರಲ್ಲಿ ಬೇರಾ ಹೇಳಿದರು.

‘‘ಕ್ಯಾನ್ಸಸ್ ಹತ್ಯೆಯ ಬೆನ್ನಿಗೇ, ದ್ವೇಷಾಪರಾಧ ಘಟನೆಗಳು ಹೆಚ್ಚುತ್ತಿವೆ’’ ಎಂದರು.

ಭಾರತ ಮೂಲದ ಅಮೆರಿಕ ಪ್ರಜೆ ದೀಪ್ ರೈ (39) ಎಂಬವರಿಗೆ ಶುಕ್ರವಾರ ಅವರ ಮನೆಯ ಹೊರಗಡೆ ಮುಖವನ್ನು ಅರ್ಧ ಮುಚ್ಚಿದ್ದ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದ. ‘‘ನಿನ್ನ ದೇಶಕ್ಕೆ ಹೋಗು’ ಎಂಬುದಾಗಿ ಗುಂಡು ಹಾರಿಸುವ ಮೊದಲು ಕೂಗಿದ್ದ.

ಭಾರತದ ತೀವ್ರ ಕಳವಳ : ಅಮೆರಿಕದಿಂದ ‘ಕ್ಷಿಪ್ರ ನ್ಯಾಯ’ದ ಭರವಸೆ

ವಾಶಿಂಗ್ಟನ್, ಮಾ. 6: ಭಾರತ ಮೂಲದ ಅಮೆರಿಕನ್ನರ ಮೇಲೆ ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಆಕ್ರಮಣಗಳ ಬಗ್ಗೆ ಅಮೆರಿಕದ ಅಧಿಕಾರಿಗಳೊಂದಿಗೆ ಭಾರತ ಕಳವಳ ವ್ಯಕ್ತಪಡಿಸಿದೆ.

ಈ ಪೈಕಿ ಎರಡು ಆಕ್ರಮಣಗಳನ್ನು ಸಂಭಾವ್ಯ ದ್ವೇಷಾಪರಾಧ ಎಂಬುದಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ.

ಈ ಘಟನೆಗಳ ಬಗ್ಗೆ ಅಮೆರಿಕದ ವಿದೇಶಾಂಗ ಇಲಾಖೆ ಸಂತಾಪ ವ್ಯಕ್ತಪಡಿಸಿದೆ ಹಾಗೂ ‘ಕ್ಷಿಪ್ರ ನ್ಯಾಯ’ದ ಭರವಸೆ ನೀಡಿದೆ ಎಂದು ವಾಶಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ರವಿವಾರ ರಾತ್ರಿ ಟ್ವೀಟ್ ಮಾಡಿದೆ.

ಹಾರ್ದಿಶ್ ಪಟೇಲ್ ಮತ್ತು ದೀಪ್ ರೈ ಅವರಿಗೆ ಸಂಬಂಧಿಸಿದ ಘಟನೆಗಳ ಬಗ್ಗೆ ಭಾರತದ ರಾಯಭಾರಿ ನವತೇಜ್ ಸರ್ನಾ ಅಮೆರಿಕ ಸರಕಾರಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದರು ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News