ಜಯಲಲಿತಾ ಚಿಕಿತ್ಸೆಯ ವೈದ್ಯಕೀಯ ದಾಖಲೆ ಸರಕಾರಕ್ಕೆ ಹಸ್ತಾಂತರ

Update: 2017-03-06 17:19 GMT

 ಹೊಸದಿಲ್ಲಿ, ಮಾ.6: ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಚಿಕಿತ್ಸೆಯ ವೈದ್ಯಕೀಯ ದಾಖಲೆಯನ್ನು ಅಖಿಲ ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆ(ಎಐಐಎಂಎಸ್) ತಮಿಳುನಾಡು ಸರಕಾರಕ್ಕೆ ಹಸ್ತಾಂತರಿಸಿದೆ.

   ಎಐಐಎಂಎಸ್ ವೈದ್ಯರು ಜಯಲಲಿತಾರ ವೈದ್ಯಕೀಯ ಚಿಕಿತ್ಸೆ ಪ್ರಕ್ರಿಯೆಯ ಅಂಗವಾಗಿ , ಚೆನ್ನೈಯ ಅಪೋಲೊ ಆಸ್ಪತ್ರೆಗೆ ತೆರಳಿದಾಗ ಜಯಲಲಿತಾರ ಆರೋಗ್ಯಸ್ಥಿತಿ ಹೇಗಿತ್ತು. ಅವರ ಅನಾರೋಗ್ಯದ ಕುರಿತು ಆಸ್ಪತ್ರೆಯ ವೈದ್ಯರು ನೀಡಿದ್ದ ವಿವರಣೆ, ಅಲ್ಲಿ ನಡೆಸಲಾಗುತ್ತಿದ್ದ ಚಿಕಿತ್ಸಾ ಕ್ರಮ, ಚಿಕಿತ್ಸೆಯ ಸಂದರ್ಭ ಆಸ್ಪತ್ರೆಗೆ ಭೇಟಿ ನೀಡಿದವರ ವಿವರ ಇತ್ಯಾದಿ ಸಂಪೂರ್ಣ ವಿವರವನ್ನು ಈ ದಾಖಲೆ ಹೊಂದಿದೆ ಎಂದು ಎಐಐಎಂಎಸ್ ಉಪನಿರ್ದೇಶಕ (ಆಡಳಿತ) ವಿ.ಶ್ರೀನಿವಾಸ್ ತಿಳಿಸಿದ್ದಾರೆ. ಸರಕಾರಿ ದಾಖಲೆಗೆ ಅಗತ್ಯವಿರುವ ಈ ದಾಖಲೆಯನ್ನು ಒದಗಿಸುವಂತೆ ತಮಿಳುನಾಡು ಸರಕಾರ ಕೇಳಿಕೊಂಡಿತ್ತು ಎಂದವರು ತಿಳಿಸಿದ್ದಾರೆ. ಜಯಲಲಿತಾ ಅವರ ಸಾವಿನ ಬಗ್ಗೆ ಹಲವಾರು ಮಂದಿ ಅನುಮಾನ ವ್ಯಕ್ತಪಡಿಸಿರುವ ಕಾರಣ ಸರಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.

   ತಮಿಳುನಾಡು ಸರಕಾರದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಜೆ.ರಾಧಾಕೃಷ್ಣನ್ ಅವರಿಗೆ ದಾಖಲೆ ಪತ್ರವನ್ನು ಶ್ರೀನಿವಾಸ್ ಹಸ್ತಾಂತರಿಸಿದರು. ಜಯಲಲಿತಾ ಅವರಿಗೆ ಚಿಕಿತ್ಸೆ ನೀಡುವಾಗ ವಂಚನೆ ಎಸಗಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಂಡಾಯ ಎದ್ದಿರುವ ಎಐಎಡಿಂಕೆ ಮುಖಂಡ ಒ.ಪನ್ನೀರ್‌ಸೆಲ್ವಂ ದೂರಿದ್ದರು. ಅಲ್ಲದೆ ಜಯಲಲಿತಾ ಸಾವಿನ ಕುರಿತು ಸಮಗ್ರ ತನಿಖೆ ನಡೆಸುವಂತೆ ಕೋರಿ ಡಿಎಂಕೆ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News