ದ.ಕ.ದಿಂದ ಸೇನೆಗೆ ಸೇರುವವರು ವಿರಳ: ಸೇನಾ ಅಧಿಕಾರಿ

Update: 2017-03-06 18:36 GMT

ಮಂಗಳೂರು, ಮಾ.6: ರಾಜ್ಯದ ಇತರ ಜಿಲ್ಲೆ ಗಳಿಗೆ ಹೋಲಿಸಿದರೆ ದ.ಕ.ಜಿಲ್ಲೆಯಿಂದ ಸೇನೆಗೆ ಸೇರುವವರ ಸಂಖ್ಯೆ ವಿರಳ ಎಂದು ಭಾರತೀಯ ಸೇನಾ ನೇಮ ಕಾತಿಯ ಕರ್ನಾಟಕ ರಾಜ್ಯ ಅಧಿಕಾರಿ ಪ್ರಶಾಂತ್ ಪೇಡ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ. 

ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸೇನಾ ನೇಮಕಾತಿ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಅವರು, ಭಾರ ತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಮಾ.12ರಿಂದ ಎ. 25ರೊಳಗೆ www.joinindianarmy.nic.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿ ಸಬಹುದಾಗಿದ್ದು, ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರ್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಅವರು ಕರೆ ನೀಡಿದರು. ದ.ಕ. ಜಿಲ್ಲೆಯಲ್ಲಿ 2015ರಲ್ಲಿ 134 ಮಂದಿ ಅರ್ಜಿ ಸಲ್ಲಿಸಿದ್ದು, 2016ರಲ್ಲಿ ಈ ಸಂಖ್ಯೆ ಕೇವಲ 34 ಮಂದಿ ಅರ್ಜಿ ಸಲ್ಲಿಸಿದ್ದಾರೆ. ದ.ಕ. ಭಾಗದಿಂದಲೂ ಹೆಚ್ಚಿನ ಯುವ ಜನತೆ ಬರುವಂತಾಗಬೇಕು. ಈ ಬಗ್ಗೆ ಜಾಗೃತಿ ಅಗತ್ಯವಿದೆ. ಉದ್ಯೋಗಕ್ಕೆ ಸೇರಿದ ಬಳಿಕ ಕೇವಲ 15 ರಿಂದ 17 ವರ್ಷ ಸೇವೆ ಸಲ್ಲಿಸಲು ಅವಕಾಶ. ಆ ನಂತರ ನಿವೃತ್ತಿ ದೊರೆಯಲಿದ್ದು, ಜೀವನದ ಅಂತ್ಯ ದವರೆಗೂ ಪೆನ್ಷನ್ ದೊರೆಯಲಿದೆ. ಆತ ಮೃತಪಟ್ಟರೆ ಆತನ ಪತ್ನಿಯ ಜೀವಿತಾವಧಿಯವರೆಗೆ ಪೆನ್ಷನ್ ದೊರೆ ಯಲಿದೆ. 17ನೆ ವಯಸ್ಸಿನಲ್ಲಿ ಸೇನೆ ಸೇರುವ ವ್ಯಕ್ತಿ 33 ವರ್ಷದೊಳಗೆ ನಿವೃತ್ತಿ ಹೊಂದುತ್ತಾರೆ ಎಂದರು.

ಸೇನಾ ನೇಮಕಾತಿ ಮುಖ್ಯ ಕಾರ್ಯಾಲಯ ಕಚೇರಿ ಆಯೋಜಿಸಿದ ಸೇನಾ ನೇಮಕಾತಿ ರ್ಯಾಲಿಯು ವಿಜಯಪುರದ ಸೈನಿಕ ಶಾಲೆಯಲ್ಲಿ ಮೇ 12ರಿಂದ 18 ರವರೆಗೆ ನಡೆಯಲಿದೆ. ಈ ಭಾಗದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಬೋಂದೆಲ್‌ನಲ್ಲಿ ಲಿಖಿತ ಪರೀಕ್ಷೆ ಆಯೋಜಿಸಲಾಗುವುದು ಎಂದವರು ಹೇಳಿದರು.

ನಿಗದಿ ಪಡಿಸಿದ ದಿನಾಂಕ ದೊಳಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮಾತ್ರ ರ್ಯಾಲಿಯಲ್ಲಿ ಭಾಗ ವಹಿಸಲು ಅರ್ಹರಾಗುತ್ತಾರೆ. ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಆನ್‌ಲೈನ್ ಮೂಲಕ ಮೇ1ರ ನಂತರ ಡೌನ್‌ಲೋಡ್ ಮಾಡಿ ಕೊಳ್ಳಬಹುದು. ನಿಗದಿಪಡಿಸಿದ ಅಂಕದೊಂದಿಗೆ ಎಸೆಸೆಲ್ಸಿ ಮತ್ತು ಪಿಯುಸಿ ತೇರ್ಗಡೆಯಾದ ಅಭ್ಯರ್ಥಿಗಳು ಭಾಗವಹಿಸಲು ಅರ್ಹರು ಎಂದರು.

 ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದ.ಕ., ಉಡುಪಿ ಸೇರಿದಂತೆ ರಾಜ್ಯದ 11 ಜಿಲ್ಲಾ ಸೈನಿಕ ಶಾಲೆಗಳ ಮೂಲಕ ನೇಮಕಾತಿ ನಡೆಯುತ್ತಿದೆ. ಅವಿವಾಹಿತ ಪುರುಷ ಅಭ್ಯರ್ಥಿಗಳಿಗೆ ಸೋಲ್ಜರ್ ಜನರಲ್ ಡ್ಯೂಟಿ, ಸೋಲ್ಜರ್(ಕ್ಲರ್ಕ್, ಸ್ಟೋರ್ ಕೀಪರ್) ಸೋಲ್ಜರ್ ಕುಶಲಕರ್ಮಿ, ಸೋಲ್ಜರ್ ತಾಂತ್ರಿಕ ಮತ್ತು ಸೋಲ್ಜರ್‌ನರ್ಸಿಂಗ್ ಸಹಾ ಯಕ ಹೀಗೆ ವಿವಿಧ ಹುದ್ದೆಗಳು ಇರಲಿವೆ. ಸಿಪಾಯಿ ಜಿ.ಡಿ. ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸೆಸೆಲ್ಸಿ ತೇರ್ಗಡೆಯಾಗಿರಬೇಕು. ಶೇ.45 ಅಂಕಗ ಳೊಂದಿಗೆ ಪ್ರತೀ ವಿಷಯದಲ್ಲಿ ಕನಿಷ್ಠ ಶೇ.33 ಅಂಕ ಹೊಂದಿರಬೇಕು. ಹದಿನೇಳುವರೆಯಿಂದ 21 ವಯ ಸ್ಸಿನೊಳಗಿರಬೇಕು. ಸಿಪಾಯಿ ಕ್ಲಾರ್ಕ್, ಎಸ್‌ಕೆಟಿ ಹುದ್ದೆಗೆ ಪಿಯುಸಿ ವಿದ್ಯಾರ್ಹತೆ ಅವಶ್ಯವಿದ್ದು ಶೇ.50 ಅಂಕಗಳನ್ನು ಪಡೆದಿರಬೇಕು. ಹದಿನೇಳುವರೆಯಿಂದ 23 ವಯಸ್ಸಿನೊಳಗಿರಬೇಕು. ಸಿಪಾಯಿ ಟೆಕ್ನಿಕಲ್ ಮತ್ತು ಸಿಪಾಯಿ ನರ್ಸಿಂಗ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಪಿಯುಸಿ ತೇರ್ಗಡೆಯಾಗಿರಬೇಕು ಮತ್ತು ಹದಿನೇಳುವರೆಯಿಂದ 23 ವಯಸ್ಸಿನೊಳಗಿನವರಾಗಿರಬೇಕು. ಸಿಪಾಯಿ ಟ್ರೇಡ್‌ಮ್ಯಾನ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸೆಸೆಲ್ಲಿ ಪಾಸಾಗಿರಬೇಕು ಮತ್ತು ಹದಿನೇಳುವರೆಯಿಂದ 23 ವಯಸ್ಸಿನೊಳಗಿನವರಾಗಿರಬೇಕು ಎಂದರು.

ಆರಂಭದಲ್ಲಿ ಶಾರೀರಿಕ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಯು 5ನಿಮಿಷ 30 ಸಕೆಂಡಿನಲ್ಲಿ 1.6ಕಿ.ಮೀ. ದೂರವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿರಬೇಕು. 166ಸೆಂಟಿಮೀಟರ್ ಎತ್ತರ, ಕನಿಷ್ಠ 50 ಕೆಜಿ ತೂಕ ಇತ್ಯಾದಿ ಅರ್ಹತೆಯೂ ಅವಶ್ಯ. ವೈದ್ಯಕೀಯ ಪರೀಕ್ಷೆ ಬಳಿಕ ಸಾಮಾನ್ಯ ವಿಷಯಕ್ಕೆ ಸಂಬಂಧಿಸಿ ಲಿಖಿತ ಪರೀಕ್ಷೆ ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ ಎಂದು ಪ್ರಶಾಂತ್ ವಿವರಿಸಿದರು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News