ಉತ್ತರ ಕೊರಿಯದಿಂದ 4 ಕ್ಷಿಪಣಿ ಹಾರಾಟ
ಸಿಯೋಲ್ (ದಕ್ಷಿಣ ಕೊರಿಯ), ಮಾ. 6: ಉತ್ತರ ಕೊರಿಯ ಸೋಮವಾರ ನಾಲ್ಕು ನಿಷೇಧಿತ ಪ್ರಕ್ಷೇಪಕ ಕ್ಷಿಪಣಿಗಳನ್ನು ಉಡಾಯಿಸಿದೆ. ಈ ಕ್ಷಿಪಣಿಗಳು ಸರಾಸರಿ 1,000 ಕಿ.ಮೀ. ದೂರವನ್ನು ಕ್ರಮಿಸಿದವು ಹಾಗೂ ಅವುಗಳ ಪೈಕಿ ಮೂರು ತನ್ನದೆಂದು ಜಪಾನ್ ಹೇಳಿಕೊಳ್ಳುವ ಜಲಪ್ರದೇಶಕ್ಕೆ ಅಪ್ಪಳಿಸಿದವು ಎಂದು ದಕ್ಷಿಣ ಕೊರಿಯ ಮತ್ತು ಜಪಾನ್ ಅಧಿಕಾರಿಗಳು ಹೇಳಿದ್ದಾರೆ.
ಅಮೆರಿಕ ಮತ್ತು ದಕ್ಷಿಣ ಕೊರಿಯಗಳು ನಡೆಸುತ್ತಿರುವ ಬೃಹತ್ ಜಂಟಿ ಸೇನಾಭ್ಯಾಸಕ್ಕೆ ಪ್ರತಿಯಾಗಿ ಉತ್ತರ ಕೊರಿಯ ಈ ಪರೀಕ್ಷಾ ಪ್ರಯೋಗ ನಡೆಸಿದೆ ಎಂದು ಹೇಳಲಾಗಿದೆ. ಜಂಟಿ ಸೇನಾಭ್ಯಾಸವು ಯುದ್ಧದ ತಾಲೀಮಾಗಿದೆ ಎಂದು ಉತ್ತರ ಕೊರಿಯ ಹೇಳಿದೆ.
ಯಾವ ಮಾದರಿಯ ಕ್ಷಿಪಣಿಯನ್ನು ಹಾರಿಸಲಾಗಿದೆ ಎನ್ನುವುದು ನಿಖರವಾಗಿ ತಿಳಿದಿಲ್ಲವಾದರೂ, ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ಈ ಪರೀಕ್ಷಾ ಹಾರಾಟಗಳನ್ನು ಪ್ರಚೋದನೆ ಎಂಬುದಾಗಿ ಪರಿಗಣಿಸಿದೆ. ಟ್ರಂಪ್ ಆಡಳಿತವು ತನ್ನ ಉತ್ತರ ಕೊರಿಯ ನೀತಿಯನ್ನು ಸಿದ್ಧಪಡಿಸುತ್ತಿದೆ.
ಉತ್ತರ ಕೊರಿಯದ ಕ್ಷಿಪಣಿ ಕಾರ್ಯಕ್ರಮದ ವಿರುದ್ಧ ಸೈಬರ್ ಮತ್ತು ಇಲೆಕ್ಟ್ರಾನಿಕ್ ದಾಳಿಗಳನ್ನು ನಡೆಸುವ ಪ್ರಯತ್ನಗಳ ಹೊರತಾಗಿಯೂ, ಪ್ಯಾಂಗ್‌ಯಾಂಗ್ (ಉತ್ತರ ಕೊರಿಯದ ರಾಜಧಾನಿ)ನ ಕೃತ್ಯಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಅಮೆರಿಕಕ್ಕೆ ಇನ್ನೂ ಸಾಧ್ಯವಾಗಿಲ್ಲ ಎಂದು ಕಳೆದ ವಾರಾಂತ್ಯದಲ್ಲಿ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿರುವುದನ್ನು ಸ್ಮರಿಸಬಹುದಾಗಿದೆ.
ಉತ್ತರ ಕೊರಿಯ ಐಸಿಬಿಎಂ ಪರೀಕ್ಷೆ ನಡೆಸಬಹುದೇ ಎಂಬ ಕಳವಳ ಈಗ ವ್ಯಾಪಕವಾಗಿ ಹರಡಿದೆ. ಇದು ಸಾಧ್ಯವಾದರೆ, ಉತ್ತರ ಕೊರಿಯದ ಕ್ಷಿಪಣಿಗಳು ಸೈದ್ಧಾಂತಿಕವಾಗಿ ಅಮೆರಿಕದ ಪ್ರಧಾನ ಭೂಮಿಯನ್ನು ತಲುಪಬಹುದು. ಸಂಪನ್ಮೂಲಗಳ ಶೋಧ ಮತ್ತು ಬಳಕೆಗೆ ಜಪಾನ್‌ಗೆ ಸಾರ್ವಭೌಮ ಹಕ್ಕುಗಳಿರುವ ಸಮುದ್ರ ಪ್ರದೇಶದಲ್ಲಿ ಮೂರು ಕ್ಷಿಪಣಿಗಳು ಅಪ್ಪಳಿಸಿವೆ ಎಂದು ಜಪಾನ್ ಅಧಿಕಾರಿಗಳು ತಿಳಿಸಿದರು. ಈ ಪ್ರದೇಶವು ಸಮುದ್ರ ತೀರದಿಂದ 200 ನಾಟಿಕಲ್ ಮೈಲಿ ದೂರದಲ್ಲಿದೆ.
ಅಮೆರಿಕ ಖಂಡನೆ
ವಾಶಿಂಗ್ಟನ್, ಮಾ. 6: ನಾಲ್ಕು ಪ್ರಕ್ಷೇಪಕ ಕ್ಷಿಪಣಿಗಳನ್ನು ಉಡಾಯಿಸಿದ ಉತ್ತರ ಕೊರಿಯದ ಕ್ರಮವನ್ನು ಅಮೆರಿಕ ಖಂಡಿಸಿದೆ ಹಾಗೂ ‘‘ಈ ಬೆಳೆಯುತ್ತಿರುವ ಬೆದರಿಕೆಯ ವಿರುದ್ಧ ನಮಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ವಾಶಿಂಗ್ಟನ್ ಸಿದ್ಧವಾಗಿದೆ’’ ಎಂದು ಅದು ಹೇಳಿದೆ. ‘‘ಉತ್ತರ ಕೊರಿಯ ನಡೆಸಿರುವ ಪ್ರಕ್ಷೇಪಕ ಕ್ಷಿಪಣಿಗಳ ಉಡಾವಣೆಯನ್ನು ಅಮೆರಿಕ ಬಲವಾಗಿ ಖಂಡಿಸುತ್ತದೆ. ಇದು ಪ್ರಕ್ಷೇಪಕ ಕ್ಷಿಪಣಿ ತಂತ್ರಜ್ಞಾನವನ್ನು ಬಳಸಿ ಉತ್ತರ ಕೊರಿಯ ಕ್ಷಿಪಣಿಗಳನ್ನು ಉಡಾಯಿಸುವುದನ್ನು ನಿಷೇಧಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ಉಲ್ಲಂಘಿಸುತ್ತದೆ’’ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಮಾರ್ಕ್ ಟೋನರ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.