×
Ad

ಕ್ಯಾಂಪಸ್ ರಾಜಕಾರಣ ಹುನ್ನಾರಕ್ಕೆ ರಾಜಸ್ಥಾನ ಹೈಕೋರ್ಟ್ ಬ್ರೇಕ್

Update: 2017-03-07 09:15 IST

ಜೈಪುರ, ಮಾ.7: ಜವಾಹರಲಾಲ್ ವಿವಿ ಪ್ರೊಫೆಸರ್ ನಿವೇದಿತಾ ಮೆನನ್ ಅವರ ಉಪನ್ಯಾಸಕ್ಕೆ ಅವಕಾಶ ಮಾಡಿಕೊಟ್ಟ ಜೋಧಪುರ ಜೈನಾರಾಯಣ್ ವ್ಯಾಸ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರೊಬ್ಬರನ್ನು ಸೇವೆಯಿಂದ ಅಮಾನತು ಮಾಡುವ ವಿವಿ ನಿರ್ಧಾರಕ್ಕೆ ರಾಜಸ್ಥಾನ ಹೈಕೋಟ್ ತಡೆಯಾಜ್ಞೆ ನೀಡಿದೆ.

ಭಾರತದ ಸೇವೆ ಮತ್ತು ಕಾಶ್ಮೀರ ಎಂಬ ವಿಷಯದ ಕುರಿತು ಜೆಎನ್‌ಯು ಪ್ರೊಫೆಸರ್ ನಿವೇದಿತಾ ಮೆನನ್ ಮಾಡಿದ ಭಾಷಣ ವಿರುದ್ಧ ಎಬಿವಿಪಿ ಪ್ರತಿಭಟನೆ ನಡೆಸುವ ಮೂಲಕ ವಿವಾದ ಸೃಷ್ಟಿಯಾಗಿತ್ತು. ಈ ವಿಚಾರ ಸಂಕಿರಣ ಆಯೋಜಿಸಿದ ಪ್ರಾಧ್ಯಾಪಕರನ್ನು ಅಮಾನತುಗೊಳಿಸಿ ವಿಶ್ವವಿದ್ಯಾನಿಲಯದ ಕುಲಪತಿ ಹಾಗೂ ರಿಜಿಸ್ಟ್ರಾರ್ ಹೊರಡಿಸಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದ ಏಕಸದಸ್ಯ ಪೀಠ, ಇವರಿಬ್ಬರಿಗೂ ನೋಟಿಸ್ ಜಾರಿಗೊಳಿಸಿದೆ. ಮುಂದಿನ ವಿಚಾರಣೆ ನಡೆಯುವ ಎಪ್ರಿಲ್ 7ರ ಒಳಗಾಗಿ ಉತ್ತರಿಸುವಂತೆ ಸೂಚಿಸಲಾಗಿದೆ. ವಿವಿ ಸಹಾಯಕ ಪ್ರಾಧ್ಯಾಪಕರನ್ನು ಅಮಾನತು ಮಾಡಿ ಫೆಬ್ರವರಿ 16ರಂದು ನೀಡಿದ್ದ ಆದೇಶಕ್ಕೆ ಮುಂದಿನ ಸೂಚನೆವರೆಗೂ ತಡೆಯಾಜ್ಞೆ ನೀಡಲಾಗಿದೆ ಎಂದು ನ್ಯಾಯಮೂರ್ತಿ ದಿನೇಶ್ ಮೆಹ್ತಾ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗ ಫೆಬ್ರವರಿ 2ರಂದು ಆಯೋಜಿಸಿದ್ದ, "ಹಿಸ್ಟರಿ ರಿಕನ್‌ಸ್ಟ್ರಕ್ಟೆಡ್ ಥ್ರೂ ಲಿಟರೇಚರ್: ನೇಷನ್, ಐಡೆಂಟಿಸಿ, ಕಲ್ಚರ್" ಎಂಬ ವಿಚಾರ ಸಂಕಿರಣದಲ್ಲಿ ಮೆನನ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಆಪಾದಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರ ಸಂಕಿರಣ ಆಯೋಜಿಸಿದ ಸಹಾಯಕ ಪ್ರಾಧ್ಯಾಪಕ ರಾಣಾವತ್ ಅವರ ವಿರುದ್ಧ ವಿಶ್ವವಿದ್ಯಾನಿಲಯ ಶಿಸ್ತುಕ್ರಮ ಕೈಗೊಂಡಿತ್ತು. ಬಳಿಕ ರಾಣಾವತ್ ಹಾಗೂ ಮೆನನ್ ವಿರುದ್ಧ ವಿವಿ ಮೊಕದ್ದಮೆ ಹೂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News