‘‘ನನ್ನ ಬದುಕು ಬೆಳಗಿದ ರಮಝಾನ್ ನ ಆ ಮಧ್ಯಾಹ್ನ’’ : ಶೊಹ್ರಾಬ್

Update: 2017-03-07 05:12 GMT

‘‘ಯಾರ ಕಣ್ಣುಗಳಲ್ಲಿಯೂ ನನಗಾಗಿ ಯಾವುದೇ ಪ್ರೀತಿ ಯಾ ಕಾಳಜಿಯನ್ನು ನಾನು ಯಾವತ್ತೂ ಕಂಡೇ ಇರಲಿಲ್ಲ. ನಾನು ಕೆಲಸ ಮಾಡುತ್ತಿರುವಾಗ ನಾನು ನರಕದಿಂದ ಬಂದವನೇನೋ ಎಂಬಂತಹ ಭಾವನೆಯನ್ನು ಜನರು ನನ್ನಲ್ಲಿ ತುಂಬುತ್ತಾರೆ. ಒಂದು ಕಪ್ ಚಹಾ ಕುಡಿಯಲೆಂದು ನಾನು ಎಲ್ಲಿಯೂ ಕೂರುವಂತಿಲ್ಲ. ಕೊಳಕನ್ನು ನೋಡುವಂತೆ ಜನ ನನ್ನನ್ನು ನೋಡುತ್ತಾರೆ. ಅಪರಿಚಿತರಿಂದ ವಿನಾ ಕಾರಣ ಅವಮಾನಕ್ಕೀಡಾದಾಗ ನನ್ನ ಕಣ್ಣಂಚಿನಲ್ಲಿ ಜಿನುಗಿದ ಕಂಬನಿಯನ್ನು ಇತರರ ಕಣ್ಣಿಗೆ ಕಾಣದಂತೆ ಅಡಗಿಸಿದ ದಿನಗಳೆಷ್ಟೋ ಇದ್ದವು. ಬಡವರಿಗಾಗಿ ಈ ಜಗತ್ತಿನಲ್ಲಿ ಯಾವುದೇ ಪ್ರೀತಿ ಉಳಿದಿಲ್ಲವೆಂದು ನನಗೆ ಸ್ಪಷ್ಟವಾಗಿತ್ತು.

ಹತ್ತು ವರ್ಷಗಳ ಹಿಂದೆ ನಾನು ಶಾಲೆಯೊಂದರ ಪಕ್ಕದಲ್ಲಿ ಕೆಲಸ ಮಾಡುತ್ತಿದ್ದೆ. ತೋಡೊಂದನ್ನು ಸ್ವಚ್ಛಗೊಳಸಿ ದುರಸ್ತಿಗೊಳಿಸುವ ಕೆಲಸ ನನ್ನದಾಗಿತ್ತು. ಆ ರಸ್ತೆಯನ್ನು ನಾವು ಬಂದ್ ಮಾಡಿದ್ದೆವು ಹಾಗೂ ನಮ್ಮ ಕೆಲಸಕ್ಕೆ ಕೆಲವು ದಿನಗಳೇ ಬೇಕಾಗಿತ್ತು. ಆದುದರಿಂದ ಮಕ್ಕಳು ಶಾಲೆಯತ್ತ ನಡೆದೇ ಹೋಗಬೇಕಿತ್ತು. ನಾನಂತೂ ನನ್ನ ಕೆಲಸದ ಮೇಲೆಯೇ ಪ್ರತಿ ದಿನ ಗಮನ ನೆಟ್ಟಿದ್ದೆ. ಯಾರಾದರೂ ಮತ್ತೆ ನನ್ನ ಕೆಲಸವನ್ನು ಅವಮಾನಿಸಬಹುದೆಂಬ ಭಯದಿಂದ ಯಾರತ್ತವೂ ದೃಷ್ಟಿ ಹರಿಸುತ್ತಿರಲಿಲ್ಲ. ಒಂದು ದಿನ ಒಬ್ಬಳು ಪುಟ್ಟ ಹುಡುಗಿ ನಗುತ್ತಾ ನನ್ನ ಬಳಿ ಬಂದಳಲ್ಲದೆ ‘‘ನೀವೇಕೆ ಇಷ್ಟೊಂದು ಕೊಳಕಾಗಿದ್ದೀರಿ?’’ ಎಂದು ಕೇಳಿದಳು.

ನಾನು ಏನಾದರೂ ಹೇಳುವ ಮೊದಲೇ ಆಕೆಯ ತಂದೆ ಅಪರಿಚಿತರ ಬಳಿ ಯಾವತ್ತೂ ಮಾತನಾಡಬಾರದು ಎಂದು ಹೇಳುತ್ತಾ ಆಕೆಯನ್ನು ಎಳೆದುಕೊಂಡು ಹೋದರು. ಆತ ತನ್ನ ಮಗಳ ಬಳಿ ನನ್ನಂತಹ ಕೆಲಸಗಾರರು ಅದೆಷ್ಟು ಅಸಹ್ಯಕರವಾಗಿರುತ್ತಾರೆ ಎಂದು ಹೇಳುತ್ತಿರಬಹುದು ಎಂದು ಯೋಚಿಸಿದಾಗಲೇ ನನಗೆ ಅಸಹನೀಯವಾಯಿತು. ಆಕೆಯ ತಂದೆ ಆಕೆಯನ್ನು ಎಳೆದುಕೊಂಡು ಹೋಗುತ್ತಿದ್ದುದರಿಂದ ಆಕೆಯೊಡನೆ ಮಾತನಾಡುವ ಅವಕಾಶ ನನಗೆ ದೊರೆಯಲೇ ಇಲ್ಲ. ‘‘ನಾನೇಕೆ ಕೊಳಕಾಗಿದ್ದೇನೆ’’ ಎಂಬ ಪ್ರಶ್ನೆಗೆ ಆಕೆಗೆ ಸುಂದರವಾದ ಉತ್ತರ ನೀಡಬೇಕೆಂದು ಯೋಚಿಸುತ್ತಲೇ ನನಗೆ ಅನೇಕ ರಾತ್ರಿ ನಿದ್ದೆಯೇ ಹತ್ತುತ್ತಿರಲಿಲ್ಲ. ಬಡವರು ಯಾವತ್ತೂ ಸ್ವಚ್ಛವಾಗಿರಲು ಸಾಧ್ಯವಿಲ್ಲ. ನಾವು ಕೊಳಕಲ್ಲೇ ಹುಟ್ಟಿ ಬೆಳೆದು, ಕೊಳಕಲ್ಲೇ ಸಾಯುವವರು ಹಾಗೂ ಒಂದು ಕೊಳಕು ವಸ್ತು ಜಗತ್ತಿನಿಂದ ಹೊರಟು ಹೋದಾಗ ಯಾರೂ ಅದರ ಬಗ್ಗೆ ಯೋಚಿಸುವುದಿಲ್ಲ. ಇಂತಹ ಮಾತುಗಳನ್ನು ನಾನು ಆಕೆಗೆ ಹೇಳುವ ಹಾಗಿರಲಿಲ್ಲ. ನಾನು ಆ ಸ್ಥಳದಲ್ಲಿನ ಕೆಲಸ ಆದಷ್ಟು ಬೇಗ ಮುಗಿಸಿ ಆ ಹುಡುಗಿ ಮತ್ತೆ ನನ್ನ ಕಣ್ಣಿಗೆ ಕಾಣಿಸದೇ ಇರಬೇಕೆಂದು ಬಯಸಿದ್ದೆ.

ಕೊನೆಗೊಂದು ದಿನ ನಮ್ಮ ಕೆಲಸ ಪೂರ್ಣಗೊಳ್ಳುತ್ತಿದ್ದಾಗ ಅದು ರಮಝಾನ್ ನ ಒಂದು ಮಧ್ಯಾಹ್ನವಾಗಿತ್ತು. ಆ ದಿನ ನಾನು ಬಹಳಷ್ಟು ಸುಸ್ತಾಗಿ ಸೋತು ಹೋಗಿದ್ದೆ. ಶಾಲೆ ಕೂಡ ಮುಚ್ಚಿತ್ತು. ಆ ಪುಟ್ಟ ಹುಡುಗಿಯೂ ಆ ದಿನ ಬಂದಿರಲಿಲ್ಲ. ನನಗೆ ಸಮಾಧಾನವಾಯಿತು. ನನ್ನ ಸಾಮಾನುಗಳೆಲ್ಲವನ್ನೂ ತೆಗೆದಿಟ್ಟು ಅಲ್ಲಿಂದ ಹೊರಡಬೇಕೆನ್ನುವಷ್ಟರಲ್ಲಿ ಆ ಪುಟ್ಟ ಹುಡುಗಿ ಓಡೋಡುತ್ತಾ ನನ್ನ ಬಳಿ ಬರುತ್ತಿರುವುದನ್ನು ನೋಡಿದೆ. ಆಕೆ ನನ್ನ ಬಳಿ ಬಂದು ನಿಂತಾಗ ಏದುಸಿರು ಬಿಡುತ್ತಿದ್ದಳು. ಅದೇ ಪ್ರಶ್ನೆಯನ್ನು ಆಕೆಯಿಂದ ಕೇಳಲು ನಾನು ಕಾಯುತ್ತಿದ್ದೆ.

ಆದರೆ ಆಕೆ ಏನನ್ನೂ ಹೇಳಲಿಲ್ಲ, ಬರೀ ನಕ್ಕಳು. ನಿನ್ನ ತಂದೆ ಎಲ್ಲಿ ಎಂದು ನಾನು ಆಕೆಯನ್ನು ಕೇಳಿದೆ. ಆಕೆ ನಮ್ಮಿಂದ ಬಹಳ ದೂರದಲ್ಲಿ ನಿಂತಿದ್ದ ಕಾರೊಂದರತ್ತ ಬೊಟ್ಟು ಮಾಡಿ ತೋರಿಸಿದಳು. ನಾನು ಮತ್ತೆ ಆಕೆ ಅದೇ ಪ್ರಶ್ನೆ ಕೇಳುತ್ತಾಳೆಂದು ಕಾದೆ. ಆಕೆ ಮಾತನಾಡಿದಳು - ‘‘ಅಂಕಲ್, ನಿಮಗೆ ಕೆಂಪು ಬಣ್ಣ ಇಷ್ಟವೇ?’’ ಕೈಗಳನ್ನು ಹಿಂದೆ ಮಾಡಿ ನಿಂತಿದ್ದ ಆಕೆ ಕೈಗಳನ್ನು ಮುಂದೆ ಮಾಡಿ ಒಂದು ಪ್ಯಾಕೆಟ್ಟನ್ನು ನನ್ನ ಕೈಗಿತ್ತಳು. ‘‘ಈ ಶರ್ಟ್ ನಿಮಗಾಗಿ, ಅಂಕಲ್.’’ ಎಂದಳು. ನನ್ನ ಬಾಯಿಯಿಂದ ಒಂದು ಮಾತೂ ಹೊರಡಲಿಲ್ಲ. ಆಕೆಯ ತಂದೆ ಸತತ ಕಾರಿನ ಹಾರ್ನ್ ಮಾಡುತ್ತಾ ಇದ್ದುದರಿಂದ ಆಕೆ ಅತ್ತ ಓಡಿದಳು. ಆ ಪುಟ್ಟ ಹುಡುಗಿ ನನ್ನನ್ನು ಕಣ್ಣೀರಿನಿಂದ ತೋಯಿಸಿದಳು. ನಮ್ಮಂತಹವರ ಮೇಲೂ ಪ್ರೀತಿ ಹಾಗೂ ಕಾಳಜಿ ತೋರಿಸುವವರಿದ್ದಾರೆಂದು ಆಕೆ ಸಾಬೀತು ಪಡಿಸಿದಳು. ಆಕೆ ಈಗ ಎಲ್ಲಿದ್ದಾಳೆ ಅಥವಾ ಏನು ಮಾಡುತ್ತಿದ್ದಾಳೆಂದು ನನಗೆ ತಿಳಿದಿಲ್ಲ. ಆ ಪುಟ್ಟ ದೇವತೆ ಎಲ್ಲಿದ್ದರೂ ದೇವರು ಆಕೆಯ ಜೀವನದಿಂದ ಯಾವತ್ತೂ ಕೊಳಕುಗಳನ್ನು ದೂರವಾಗಿಡಲಿ ಎಂದು ನಾನು ಪ್ರತಿ ದಿನವೂ ಪ್ರಾರ್ಥಿಸುತ್ತೇನೆ.

ಶೊಹ್ರಾಬ್

Full View

Writer - ಜಿ ಎಂ ಬಿ ಆಕಾಶ್

contributor

Editor - ಜಿ ಎಂ ಬಿ ಆಕಾಶ್

contributor

Similar News