ನಮಾಝ್ ನಿಂದ ಬೆನ್ನು ನೋವು ಶಮನ, ಕೀಲುಗಳಲ್ಲಿ ಹೆಚ್ಚಿನ ಚಲನಶೀಲತೆ

Update: 2017-03-07 12:18 GMT

ಮುಸ್ಲಿಮರ ಪ್ರಾರ್ಥನಾ ವಿಧಿ ‘ನಮಾಝ್’ಅನ್ನು ಸರಿಯಾಗಿ ಮಾಡಿದರೆ ಅದು ಕೆಳಬೆನ್ನಿನ ನೋವನ್ನು ತಗ್ಗಿಸಬಲ್ಲುದು ಎನ್ನುತ್ತಾರೆ ಸಂಶೋಧಕರು.

ನಮಾಝ್‌ನ್ನು ನಿಯಮಿತವಾಗಿ ಮತ್ತು ಸರಿಯಾಗಿ ಮಾಡಿದರೆ ಆ ವೇಳೆಯ ಸಂಕೀರ್ಣ ದೈಹಿಕ ಚಲನವಲನಗಳು ಕೆಳಬೆನ್ನಿನ ನೋವನ್ನು ತಗ್ಗಿಸುತ್ತವೆ ಎಂದು ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಇಂಡಸ್ಟ್ರಿಯಲ್ ಆ್ಯಂಡ್ ಸಿಸ್ಟಮ್ಸ್ ಇಂಜಿನಿಯರಿಂಗ್‌ನ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾಗಿರುವ ಸಂಶೋಧನಾ ವರದಿ ಹೇಳಿದೆ. ಜಗತ್ತಿನಾದ್ಯಂತ ಸುಮಾರು 160 ಕೋಟಿ ಮುಸ್ಲಿಮರು ದಿನಕ್ಕೆ ಐದು ಬಾರಿ ನಮಾಝ್ ಮಾಡುತ್ತಾರೆ ಮತ್ತು ಈ ಸಂದರ್ಭದಲ್ಲಿ ಬಗ್ಗುವ,ಮಂಡಿಯೂರುವ ಮತ್ತು ಹಣೆಯನ್ನು ನೆಲಕ್ಕೆ ಹಚ್ಚುವ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ.

 ನಮಾಝ್ ಸಂದರ್ಭದಲ್ಲಿನ ದೈಹಿಕ ಚಲನವಲನಗಳು ಯೋಗಾಭ್ಯಾಸ ಅಥವಾ ಕೆಳ ಬೆನ್ನುನೋವಿನ ಚಿಕಿತ್ಸೆಗೆ ಬಳಸಲಾಗುವ ಫಿಝಿಯೋ ಥೆರಪಿ ವಿಧಾನಗಳನ್ನು ಹೋಲುತ್ತವೆ ಎಂದು ಸಂಶೋಧನಾ ವರದಿಯನ್ನು ಸಿದ್ಧಗೊಳಿಸಿದ ತಂಡದ ಸದಸ್ಯ ಬಿಂಗಾಮ್ಟನ್ ವಿವಿಯ ಸಿಸ್ಟಮ್ಸ್ ಸೈನ್ಸ್ ಮತ್ತು ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ.ಮುಹಮ್ಮದ್ ಖಾಸಾವ್ನೆ ತಿಳಿಸಿದರು.

ಸಂಶೋಧನೆಯು ಇಸ್ಲಾಮಿಕ ಪ್ರಾರ್ಥನೆಯ ಮೇಲೆ ವಿಶೇಷ ಗಮನವನ್ನು ಕೇಂದ್ರೀಕರಿಸಿದ್ದು, ಕ್ರೈಸ್ತರು ಮತ್ತು ಯಹೂದಿಗಳ ಪ್ರಾರ್ಥನೆಗಳ ಸಮಯದಲ್ಲಿಯೂ ಯೋಗ ಮತ್ತು ಫಿಝಿಯೊ ಥೆರಪಿಯನ್ನು ಹೋಲುವ ಇಂತಹ ಚಲನವಲನಗಳು ಕಂಡು ಬಂದಿವೆ.

ಸಾಮಾಜಿಕ-ಆರ್ಥಿಕ ಸ್ಥಿತಿ, ಜೀವನ ಶೈಲಿ ಮತ್ತು ಧಾರ್ಮಿಕ ಅಂಶಗಳು ದೈಹಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಅಲ್ಲದೆ ಪ್ರಾರ್ಥನೆ ಮತ್ತು ಆರೋಗ್ಯಪೂರ್ಣವಾದ ಜೀವನಶೈಲಿಯನ್ನು ಕಾಯ್ದುಕೊಳ್ಳುವ ಜಾಗ್ರತಿಯ ನಡುವೆ ಗಾಢವಾದ ಸಂಬಂಧ ಇದೆ ಎನ್ನುವುದನ್ನು ಅಧ್ಯಯನಗಳು ಬೆಟ್ಟು ಮಾಡಿವೆ ಎಂದು ಖಾಸಾವ್ನೆ ಹೇಳಿದರು.

ಪ್ರಾರ್ಥನೆಯು ದೈಹಿಕ ಒತ್ತಡ ಮತ್ತು ತಲ್ಲಣಗಳನ್ನು ನಿವಾರಿಸುತ್ತದೆ. ಪ್ರಾರ್ಥನೆಯ ವಿಧಿಗಳನ್ನು ಸ್ನಾಯು-ಎಲುಬು-ಸಂದು ರೋಗಗಳಿಗೆ ಪರಿಣಾಮಕಾರಿ ಕ್ಲಿನಿಕಲ್ ಚಿಕಿತ್ಸೆಯೆಂದು ಪರಿಗಣಿಸಬಹುದಾಗಿದೆ ಎಂದೂ ಸಂಶೋಧನೆಗಳು ಬೆಟ್ಟು ಮಾಡಿವೆ ಎಂದರು.

 ನಮಾಝ್ ವೇಳೆ ಬಗ್ಗುವ ಪ್ರಕ್ರಿಯೆಯು ಕೆಳಬೆನ್ನಿನ ಮೇಲೆ ಹೆಚ್ಚಿನ ಒತ್ತಡವನ್ನು ಹೇರುತ್ತದೆ. ಆದರೆ ಕೆಳ ಬೆನ್ನುನೋವು ಹೊಂದಿರುವ ವ್ಯಕ್ತಿಗಳು ಮಂಡಿಯೂರುವಾಗ ಮತ್ತು ಬೆನ್ನನ್ನು ಬಗ್ಗಿಸುವಾಗ ಸೂಕ್ತ ಕೋನಗಳಲ್ಲಿ ಅದನ್ನು ಮಾಡಿದರೆ ನೋವು ಕಡಿಮೆಯಾಗುತ್ತದೆ. ಈ ಕೋನಗಳು ಆಯಾ ವ್ಯಕ್ತಿಯ ದೇಹಾಕೃತಿಯನ್ನು ಅವಲಂಬಿಸಿರುತ್ತವೆ ಎನ್ನುವುದೂ ಸಂಶೋಧನೆಯಿಂದ ಬೆಳಕಿಗೆ ಬಂದಿದೆ.

 ಬೆನ್ನುನೋವನ್ನು ಹೊಂದಿರುವ ವ್ಯಕ್ತಿಗಳು ನಮಾಝ್ ಸಂದರ್ಭದಲ್ಲಿ ನಿಗದಿತ ಭಂಗಿಯನ್ನು ಕಾಯ್ದುಕೊಳ್ಳುವುದು ಸಾಧ್ಯವಾಗದಿರಬಹುದು. ಇಸ್ಲಾಮಿಕ್ ಸಂಪ್ರದಾಯಗಳು ಮತ್ತು ರೂಢಿಗಳಂತೆ ವ್ಯಕ್ತಿಗೆ ನಿಂತುಕೊಳ್ಳಲು ಸಾಧ್ಯವಾಗದಿದ್ದರೆ ಕುಳಿತು ಅಥವಾ ಮಲಗಿ ಪ್ರಾರ್ಥನೆಯನ್ನು ಸಲ್ಲಿಸಬಹುದು. ಅವರಿಗೆ ನಿಲ್ಲಲು ಸಾಧ್ಯವಾಗುತ್ತಿದ್ದರೆ ಅವರು ಸಾಧ್ಯವಾದಷ್ಟು ಮಟ್ಟಿಗೆ ನಿಗದಿತ ಭಂಗಿಯನ್ನು ಅನುಸರಿಸಬೇಕು ಎಂದು ಖಾಸಾವ್ನೆ ಹೇಳಿದರು. ನೋವಿನ ಮಟ್ಟವನ್ನು ಆಧರಿಸಿ ಬೆನ್ನು ಮತ್ತು ಮಂಡಿ ಕೋನಗಳನ್ನು ಗುರುತಿಸಬಹುದು ಎಂದರು.

ಮಂಡಿಗಳನ್ನೂರುವ ಪ್ರಕ್ರಿಯೆ ಕೀಲುಗಳ ಚಲನಶೀಲತೆಯನ್ನು ಹೆಚ್ಚಿಸುತ್ತದೆ. ಕೀಲುಗಳ ಸಮಸ್ಯೆಯಿರುವವರು ಮಂಡಿಯೂರುವ ಭಂಗಿಯಲ್ಲಿ ಹೆಚ್ಚು ಸಮಯ ಇರಬಹುದಾಗಿದೆ ಎಂದು ಅವರು ಹೇಳಿದರು.

ತಪ್ಪು ಕೋನ ಮತ್ತು ಚಲನವಲನಗಳು ನೋವನ್ನು ಹೆಚ್ಚಿಸಬಹುದು ಎಂದೂ ಸಂಶೋಧನಾ ತಂಡವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News