×
Ad

ಲಂಚಾವತಾರದಲ್ಲಿ ಭಾರತ ನಂ.1 : ಸಮೀಕ್ಷೆ ಬಹಿರಂಗ

Update: 2017-03-07 20:40 IST

ಬರ್ಲಿನ್,ಮಾ.7: ಏಶ್ಯ ಪೆಸಿಫಿಕ್ ರಾಷ್ಟ್ರಗಳಲ್ಲೇ ಭಾರತದಲ್ಲಿ ಲಂಚಾವತಾರವು ಅತ್ಯಧಿಕವಾಗಿದೆಯೆಂಬ ಕಳವಳಕಾರಿ ವಿಷಯವನ್ನು ಅಂತಾರಾಷ್ಟ್ರೀಯ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಸಾರ್ವಜನಿಕ ಸೇವೆಗಳನ್ನು ಪಡೆದುಕೊಳ್ಳುವುದಕ್ಕಾಗಿ ಮೂರನೆ ಎರಡರಷ್ಟು ಭಾರತೀಯರು ಸರಕಾರಿ ಉದ್ಯೋಗಿಗಳಿಗೆ ‘ಚಹಾ ಕುಡಿಯಲು ಹಣ’ ಮತ್ತಿತರ ರೂಪಗಳಲ್ಲಿ ಲಂಚವನ್ನು ನೀಡುತ್ತಿರುವ ಬಗ್ಗೆ ಅದು ಬೆಳಕು ಚೆಲ್ಲಿದೆ.

 ಅಂತಾರಾಷ್ಟ್ರೀಯ ಲಂಚ ವಿರೋಧಿ ಹಕ್ಕುಗಳ ಸಂಘಟನೆ ‘ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್’ ಆಯೋಜಿಸಿದ್ದ ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.69 ಮಂದಿ ಭಾರತೀಯರು ತಾವು ವಿವಿಧ ಕಾರಣಗಳಿಗಾಗಿ ಲಂಚವನ್ನು ನೀಡಿರುವುದಾಗಿ ಹೇಳಿದ್ದಾರೆ. ಲಂಚಗುಳಿತನದಲ್ಲಿ ವಿಯೆಟ್ನಾಂನಲ್ಲಿ ಎರಡನೆ ಸ್ಥಾನದಲ್ಲಿದ್ದು, ಅಲ್ಲಿ ಶೇ.65 ಮಂದಿಗೆ ಲಂಚ ನೀಡಿದ ಅನುಭವವಾಗಿದೆ. ಚೀನಾದಲ್ಲಿ ಅತ್ಯಂತ ಕಡಿಮೆ ಭ್ರಷ್ಟಾಚಾರವಿದ್ದು, ಶೇ.26 ಮಂದಿ ಮಾತ್ರವೇ ಲಂಚಾವತಾರದಿಂದ ಬಾಧಿತರಾಗಿದ್ದಾರೆ. ನೆರೆಯ ರಾಷ್ಟ್ರವಾದ ಪಾಕಿಸ್ತಾನದಲ್ಲಿ ಶೇ.40 ಮಂದಿ ಲಂಚವನ್ನು ನೀಡಿರುವುದಾಗಿ ಹೇಳಿದ್ದಾರೆಂದು ಸಮೀಕ್ಷೆ ಹೇಳಿದೆ.

ಜಪಾನ್‌ನಲ್ಲಿ ಅತ್ಯಂತ ಕನಿಷ್ಠ ಮಟ್ಟದ ಅಂದರೆ ಶೇ.0.2ರಷ್ಟು ಭ್ರಷ್ಟಾಚಾರವಿದೆ.ದ.ಕೊರಿಯದಲ್ಲಿಯೂ ಕೇವಲ ಶೇ.3ರಷ್ಟು ಮಂದಿಗೆ ಲಂಚ ನೀಡಿದ ಅನುಭವವಾಗಿದೆ.

 ಆದಾಗ್ಯೂ ಚೀನಾದಲ್ಲಿ ಲಂಚ ನೀಡಿಕೆಯ ಪ್ರಮಾಣದಲ್ಲಿ ಅತ್ಯಧಿಕ ಏರಿಕೆ ಕಂಡುಬಂದಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.73 ಮಂದಿ ಚೀನಿಯರು ಕಳೆದ ಒಂದು ವರ್ಷದಲ್ಲಿ ತಮ್ಮ ದೇಶದಲ್ಲಿ ಲಂಚದ ಹಾವಳಿಯಲ್ಲಿ ಏರಿಕೆಯಾಗಿದೆಯೆಂದು ತಿಳಿಸಿದ್ದಾರೆ.

ಭ್ರಷ್ಟಾಚಾರದಿಂದ ಬಾಧಿತವಾದ ರಾಷ್ಟ್ರಗಳ ಪೈಕಿ ಭಾರತವು ಏಳನೇ ಸ್ಥಾನದಲ್ಲಿದ್ದು, ಇದು ಪಾಕಿಸ್ತಾನ, ಆಸ್ಟ್ರೇಲಿಯ, ಜಪಾನ್, ಮ್ಯಾನ್ಮಾರ್, ಶ್ರೀಲಂಕಾ ಹಾಗೂ ಥೈಲ್ಯಾಂಡ್‌ಗಿಂತ ಅಧಿಕವಾಗಿದೆ.

ಏಶ್ಯ-ಪೆಸಿಫಿಕ್ ಪ್ರದೇಶದ 16 ರಾಷ್ಟ್ರಗಳ 20 ಸಾವಿರ ಮಂದಿ ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

    ಭ್ರಷ್ಟಾಚಾರದ ಪಿಡುಗು ವ್ಯಾಪಕವಾಗಿರುವ ಸಾರ್ವಜನಿಕ ಸೇವೆಗಳ ಪಟ್ಟಿಯಲ್ಲಿ ಪೊಲೀಸ್ ಇಲಾಖೆಯು ಮೊದಲ ಸ್ಥಾನದಲ್ಲಿದ್ದು, ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.38ರಷ್ಟು ಮಂದಿ ತಾವು ಪೊಲೀಸರಿಗೆ ಲಂಚ ಪಾವತಿಸಿರುವುದಾಗಿ ತಿಳಿಸಿದ್ದಾರೆ.

    ದಾಖಲೆಗಳನ್ನು ಅಥವಾ ಸೇವೆಗನ್ನು ಪಡೆಯುವುದಕ್ಕಾಗಿ ಪೊಲೀಸರು, ನ್ಯಾಯಾಧೀಶರು, ಕೋರ್ಟ್ ಅಧಿಕಾರಿಗಳು, ಅಧ್ಯಾಪಕರು, ಆಸ್ಪತ್ರೆ ಸಿಬ್ಬಂದಿ ಅಥವಾ ಸರಕಾರಿ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕ ಸೇವೆಗಳ ಅಧಿಕಾರಿಗಳಿಗೆ ತಾವು ಎಷ್ಟು ಬಾರಿ ಲಂಚ ನೀಡಬೇಕಾಗಿ ಬಂತು, ಅವರಿಗೆ ನಗದು ಅಥವಾ ಉಡುಗೊರೆ ರೂಪದಲ್ಲಿ ಲಂಚ ನೀಡಿದ್ದೀರಾ ಎಂಬಿತ್ಯಾದಿ ಪ್ರಶ್ನೆಗಳನ್ನು ಸಮೀಕ್ಷೆಯಲ್ಲಿ ಪಾಲ್ಗೊಂಡವರಿಗೆ ಕೇಳಲಾಗಿತ್ತು.

ಏಶ್ಯಪೆಸಿಫಿಕ್ ಪ್ರದೇಶಾದ್ಯಂತ ರಾಷ್ಟ್ರಗಳಲ್ಲಿ ಭ್ರಷ್ಟಾಚಾರವನ್ನು ಬಯಲಿಗೆಳೆಯುವವರಿಗೆ ಕಾನೂನು ನಿರ್ಮಾತೃಗಳಿಂದ ಇನ್ನೂ ಹೆಚ್ಚಿನ ಬೆಂಬಲದ ಅವಶ್ಯಕತೆಯಿದೆ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಆಶ್ವಾಸನೆಗಳನ್ನು ಸರಕಾರವು ಉಳಿಸಿಕೊಳ್ಳಬೇಕಾಗಿದೆ ಎಂದು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್ ತಿಳಿಸಿದೆ.

ಇಂದು ಸಾರ್ವಜನಿಕ ಸೇವೆಗಳನ್ನು ಪಡೆಯಲು ಕೋಟ್ಯಂತರ ಮಂದಿ ಲಂಚ ನೀಡಬೇಕಾದ ಪರಿಸ್ಥಿತಿಯಿದೆ. ಇದರಿಂದಾಗಿ ಬಡವರು ತೀವ್ರವಾದ ಬಾಧೆಗೊಳಗಾಗಿದ್ದಾರೆಎಂದು ಟ್ರ್ಖಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್‌ನ ಅಧ್ಯಕ್ಷ ಜೋಸ್ ಉಗಾಝ್ ತಿಳಿಸಿದ್ದಾರೆ.

   ‘‘ಸಮರ್ಪಕವಾದ ಕಾನೂನು ಜಾರಿಯಾಗದೆ ಇದ್ದಲ್ಲಿ ಭ್ರಷ್ಟಾಚಾರವು ಉಲ್ಬಣಿಸುತ್ತಲೇ ಹೋಗುವುದು. ಲಂಚಗುಳಿತನವು ಸಣ್ಣ ಅಪಾರಾಧವೇನೂ ಅಲ್ಲ. ಆದು ಊಟದ ತಟ್ಟೆಯಲ್ಲಿರುವ ಆಹಾರವನ್ನು ಕಸಿಯುತ್ತದೆ, ಶಿಕ್ಷಣ ಪಡೆಯುವುದಕ್ಕೆ ತಡೆಯೊಡ್ಡುತ್ತದೆ. ಸಮರ್ಪಕ ಆರೋಗ್ಯಪಾಲನಾ ಸೌಲಭ್ಯಗಳನ್ನು ಪಡೆಯುವುದಕ್ಕೂ ಅಡ್ಡಿಯುಂಟು ಮಾಡುತ್ತದೆ. ಅಂತಿಮವಾಗಿ ಈ ಪಿಡುಗು ಮಾನವನನ್ನು ಕೊಲ್ಲಲೂಬಹುದು’’

 ಜೋಸ್ ಉಗಾಝ್, ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News