ಮೊದಲ ಟೆಸ್ಟ್: ಸುಸ್ಥಿತಿಯಲ್ಲಿ ಶ್ರೀಲಂಕಾ
ಗಾಲೆ, ಮಾ.7: ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಕುಶಾಲ್ ಪರೇರ ಸಿಡಿಸಿದ ಅಜೇಯ ಶತಕದ(166)ಸಹಾಯದಿಂದ ಶ್ರೀಲಂಕಾ ತಂಡ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಉತ್ತಮ ಮೊತ್ತ ಕಲೆಹಾಕಿದೆ.
ಗಾಲೆ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಮಂಗಳವಾರ ಆರಂಭವಾದ ಮೊದಲ ಟೆಸ್ಟ್‌ನಲ್ಲಿ ಮೆಂಡಿಸ್ ಅಜೇಯ ಶತಕ(166ರನ್, 242ಎಸೆತ, 18 ಬೌಂಡರಿ, 2 ಸಿಕ್ಸರ್)ಬಾರಿಸಿದರು. ಶ್ರೀಲಂಕಾ 92 ರನ್‌ಗ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಮೆಂಡಿಸ್ ಹಾಗೂ ಅಸೆಲಾ ಗುಣರತ್ನೆ(85 ರನ್, 134 ಎಸೆತ,7 ಬೌಂಡರಿ)ನಾಲ್ಕನೆ ವಿಕೆಟ್‌ಗೆ 196 ರನ್ ಜೊತೆಯಾಟ ನಡೆಸಿದರು.
ಮೆಂಡಿಸ್ ಖಾತೆ ತೆರೆಯುವ ಮೊದಲೇ ಬಾಂಗ್ಲಾದೇಶದ ವೇಗದ ಬೌಲರ್ ಸುಭಾಸಿಸ್ ರಾಯ್ ಎಸೆತದಲ್ಲಿ ವಿಕೆಟ್‌ಕೀಪರ್ ಲಿಟನ್ ದಾಸ್ ಪಡೆದ ಕ್ಯಾಚ್‌ಗೆ ಔಟಾಗಿದ್ದರು. ಆದರೆ, ಟಿವಿ ರಿಪ್ಲೇಯಲ್ಲಿ ರಾಯ್ ನೋ ಬಾಲ್ ಎಸೆದಿರುವುದು ಸ್ಪಷ್ಟವಾದ ಹಿನ್ನೆಲೆಯಲ್ಲಿ ಅಂಪೈರ್ ನಾಟೌಟ್ ತೀರ್ಪು ನೀಡಿದರು. ಜೀವದಾನದ ಲಾಭ ಪಡೆದ 22ರ ಹರೆಯದ ಮೆಂಡಿಸ್ ದ್ವಿತೀಯ ಟೆಸ್ಟ್ ಶತಕ ಪೂರೈಸಿದರು.
ಮೆಂಡಿಸ್ ಅವರು ಸೌಮ್ಯ ಸರ್ಕಾರ್ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಶತಕ ಪೂರೈಸಿದರು. 4ನೆ ವಿಕೆಟ್‌ನಲ್ಲಿ 194 ರನ್ ಜೊತೆಯಾಟ ನಡೆಸಿದ ಪರೇರ ಹಾಗೂ ಮೆಂಡಿಸ್ ಆತಿಥೇಯರು ಮೊದಲ ದಿನದಾಟದಂತ್ಯಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ನೆರವಾದರು.
ಖಾಯಂ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಅನುಪಸ್ಥಿತಿಯಲ್ಲಿ ಆಡುವ 11ರ ಬಳಗಕ್ಕೆ ಸೇರ್ಪಡೆಯಾಗಿದ್ದ ಗುಣರತ್ನೆ ಮೂರನೆ ಟೆಸ್ಟ್‌ನಲ್ಲಿ ಎರಡನೆ ಅರ್ಧಶತಕ ಬಾರಿಸಿ ತಸ್ಕಿನ್ ಅಹ್ಮದ್‌ಗೆ ವಿಕೆಟ್ ಒಪ್ಪಿಸಿದರು.
54 ಎಸೆತಗಳನ್ನು ಎದುರಿಸಿದ್ದ ದಿನೇಶ್ ಚಾಂಡಿಮಲ್ ಕೇವಲ 5 ರನ್ ಗಳಿಸಿ ಮುಸ್ತಫಿಝುರ್ರಹ್ಮಾನ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.
ಇದಕ್ಕೆ ಮೊದಲು ಟಾಸ್ ಜಯಿಸಿದ ಹಂಗಾಮಿ ನಾಯಕ ರಂಗನ ಹೆರಾತ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕ ಆಟಗಾರ ಉಪುಲ್ ತರಂಗ(4) 6ನೆ ಓವರ್‌ನಲ್ಲಿ ಮಿರಾಝ್ ಎಸೆತದಲ್ಲಿ ಕ್ಲೀನ್‌ಬೌಲ್ಡಾದರು. ಮೆಂಡಿಸ್ ಹಾಗೂ ಕರುಣರತ್ನೆ(30) 2ನೆ ವಿಕೆಟ್‌ಗೆ 54 ರನ್ ಸೇರಿಸಿ ತಂಡಕ್ಕೆ ಆಸರೆಯಾದರು. ಬಾಂಗ್ಲಾದ 19ರ ಹರೆಯದ ಸ್ಪಿನ್ನರ್ ಮೆಹದಿ ಇನ್ನೋರ್ವ ಆರಂಭಿಕ ಆಟಗಾರ ಮೆಹೆದಿಗೆ ವಿಕೆಟ್ ಒಪ್ಪಿಸಿದರು.
ನಾಯಕ ಮುಶ್ಫಿಕುರ್ರಹೀಂ ಬ್ಯಾಟಿಂಗ್‌ನತ್ತ ಹೆಚ್ಚು ಗಮನ ಹರಿಸುವ ಉದ್ದೇಶದಿಂದ ಲಿಟನ್‌ಗೆ ವಿಕೆಟ್‌ಕೀಪಿಂಗ್ ಜವಾಬ್ದಾರಿಕೊಟ್ಟರು.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ ಪ್ರಥಮ ಇನಿಂಗ್ಸ್: 88 ಓವರ್‌ಗಳಲ್ಲಿ 321/4
(ಕುಶಾಲ್ ಮೆಂಡಿಸ್ ಅಜೇಯ 166, ಗುಣರತ್ನೆ 85, ಕರುಣರತ್ನೆ 30, ತಸ್ಕಿನ್ ಅಹ್ಮದ್ 1-48)