ಸಲ್ಮಾನ್ ಖುರ್ಷಿದ್ ಅವರ ಆನ್ ಲೈನ್ ನಾಯಿ ಮರಿ ಖರೀದಿ ಕತೆ
ಹೊಸದಿಲ್ಲಿ,ಮಾ.8: ಆನ್‌ಲೈನ್ ಮೂಲಕ ಮಾಲ್ಟೀಸ್ ನಾಯಿಮರಿಗಳನ್ನು ಖರೀದಿಸಲು ಪ್ರಯತ್ನಿಸಿದ್ದ ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರು ಅಪರಿಚಿತ ವ್ಯಕ್ತಿಗಳಿಂದ 59,000 ರೂ.ಗಳಿಗ ಟೋಪಿ ಹಾಕಿಸಿಕೊಂಡಿದ್ದಾರೆ.
ಖುರ್ಷಿದ್‌ರ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ದಿಲ್ಲಿ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕವು ತನಿಖೆಯನ್ನು ನಡೆಸುತ್ತಿದೆ.
ಫೆ.13ರಂದು ಅಂತರ್ಜಾಲವನ್ನು ಜಾಲಾಡುತ್ತಿದ್ದ ಖುರ್ಷಿದ್ ಅವರ ಕಣ್ಣಿಗೆ ತಲಾ 12,000 ರೂ.ಗಳಿಗೆ ಮಾಲ್ಟೀಸ್ ನಾಯಿಮರಿಗಳ ಮಾರಾಟದ ಜಾಹೀರಾತು ಕಣ್ಣಿಗೆ ಬಿದ್ದಿತ್ತು. ಅಲ್ಲಿ ನೀಡಲಾಗಿದ್ದ ಲಿಂಕ್ ಕ್ಲಿಕ್ಕಿಸಿ ಸಂಬಂಧಿತ ವೆಬ್‌ಸೈಟ್ ತಲುಪಿ,ಕೇರಳದ ಥೆಕ್ಕಡ್ ನಿವಾಸಿಯೆಂದು ಹೇಳಿಕೊಂಡಿದ್ದ ಟಾಮಿ ವಾಲೇಸ್ ಎಂಬಾತನನ್ನು ಇ-ಮೇಲ್ ಮೂಲಕ ಸಂಪರ್ಕಿಸಿದ್ದರು. ಫೆ.19ರವರೆಗೆ ಇ-ಮೇಲ್ ವ್ಯವಹಾರ ಮುಂದುವರಿದಿದ್ದು, ಬಳಿಕ ಖುರ್ಷಿದ್‌ರ ಕಚೇರಿ ಸಿಬ್ಬಂದಿಯೋರ್ವ ಟಾಮಿಯನ್ನು ಸಂಪರ್ಕಿಸಿದ್ದ. ಆತ ತಿಳಿಸಿದಂತೆ ಅಂಕಿತ್ ಬದ್ರಿ ಎಂಬಾತನ ಬ್ಯಾಂಕ್ ಖಾತೆಗೆ 59,000 ರೂ.ಗಳನ್ನು ವರ್ಗಾವಣೆ ಮಾಡಲಾಗಿತ್ತು. ಖುರ್ಷಿದ್‌ರ ದೂರಿನಲ್ಲಿ ಟಾಮಿ ಜೊತೆಗೆ ಬದ್ರಿಯನ್ನೂ ಆರೋಪಿಯೆಂದು ಹೆಸರಿಸಲಾಗಿದೆ
ಹಣ ವರ್ಗಾವಣೆಗೊಂಡ ಬಳಿಕ ಟಾಮಿ ತಾನು ತನ್ನ ಅಮೆರಿಕದ ಶುಲ್ಕರಹಿತ ಫೋನ್‌ನಲ್ಲಿ ಮತ್ತು ಫೇಸ್‌ಬುಕ್‌ನಲ್ಲಿ ಲಭ್ಯವಿರುತ್ತೇನೆ ಎಂದು ತಿಳಿಸಿದ್ದ.
ನಂತರ ನಾಯಿಮರಿಗಳ ಆರೋಗ್ಯ ತಪಾಸಣೆ, ಆರೋಗ್ಯ ಪ್ರಮಾಣಪತ್ರ ಮತ್ತು ದಿಲ್ಲಿಗೆ ಸಾಗಾಣಿಕೆ ವೆಚ್ಚದ ನೆಪದಲ್ಲಿ ಇನ್ನಷ್ಟು ಹಣವನ್ನು ಪಾವತಿಸುವಂತೆ ಆರೋಪಿ ಖುರ್ಷಿದ್ ಮುಂದೆ ಬೇಡಿಕೆಯನ್ನಿರಿಸಿದ್ದ.
ಸಾಕುಪ್ರಾಣಿಗಳ ಸಾಗಾಣಿಕೆ ಸಂಸ್ಥೆ ಪ್ಯಾಸಿಫಿಕ್ ಪೆಟ್ ರಿ-ಲೊಕೇಟರ್ಸ್ ಮೂಲಕ ನಾಯಿಮರಿಗಳನ್ನು ರವಾನಿಸುತ್ತಿರುವುದಾಗಿ ಟಾಮಿ ಹೇಳಿದ್ದನಾದರೂ ನಾಯಿಮರಿಗಳು ಮಾತ್ರ ಇಂದಿಗೂ ಖುರ್ಷಿದ್‌ರನ್ನು ತಲುಪಿಲ್ಲ.
ಬ್ಯಾಂಕ್ ಖಾತೆ ವಿವರ ಮತ್ತು ಫೇಸ್‌ಬುಕ್ ಪೇಜ್ ಲಿಂಕ್ ಮೂಲಕ ಆರೋಪಿಯನ್ನು ಗುರುತಿಸಲು ಪ್ರಯತ್ನಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಬಿಟ್‌ಕಾಯ್ನಗಳ ಆನ್‌ಲೈನ್ ವಹಿವಾಟಿನಲ್ಲಿಯೂ ತೊಡಗಿ ಕೊಂಡಿದ್ದು, ಇ-ಕಾಮರ್ಸ್ ಜಾಲತಾಣಗಳಲ್ಲಿ ಜಾಹೀರಾತುಗಳ ಮೂಲಕ ಖರೀದಿದಾರರಿಗೆ ಆಮಿಷವೊಡ್ಡುತ್ತಿದ್ದಾನೆ ಎಂದು ಮಾಜಿ ವಿದೇಶಾಂಗ ಸಚಿವರು ತನ್ನ ದೂರಿನಲ್ಲಿ ಆರೋಪಿಸಿದ್ದಾರಾದರೂ ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್ ನಲ್ಲಿ ಇದನ್ನು ಉಲ್ಲೇಖಿಸಲಾಗಿಲ್ಲ.
ತನ್ನ ಕಡೆಯಿಂದ ತನಿಖೆ ನಡೆಸಿದ್ದು,ಎಲ್ಲ ವಿವರಗಳನ್ನು ಪೊಲೀಸರಿಗೆ ನೀಡಲಾಗಿದೆ ಎಂದಿರುವ ಖುರ್ಷಿದ್, ಸೈಬರ್ ಭದ್ರತೆ ಬಹು ದೊಡ್ಡ ಸಮಸ್ಯೆಯಾಗಿದೆ. ಪೊಲೀಸರು ಇದರ ಮೂಲವನ್ನು ಭೇದಿಸುತ್ತಾರೆ ಎಂದು ಆಶಯ ವ್ಯಕ್ತಪಪಡಿಸಿದ್ದಾರೆ.