ಪೊಕ್ಸೊ ಕಾನೂನಡಿಯಲ್ಲಿ ಕೇಸು ದಾಖಲಿಸಲಾಗುವುದು : ಪಿಣರಾಯಿ

Update: 2017-03-08 09:09 GMT

ತಿರುವನಂತಪುರಂ,ಮಾ. 8: ವಾಳಯಾರ್ ನಲ್ಲಿ ಇಬ್ಬರು ಹೆಣ್ಣು ಮಕ್ಕಳು ನಿಗೂಢ ರೀತಿಯಲ್ಲಿ ಮೃತಪಟ್ಟ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಪೊಕ್ಸೊ ಕಾನೂನಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಧಾನಸಭೆಯಲ್ಲಿ ಹೇಳಿದ್ದಾರೆ.

ಮೊದಲ ಬಾಲಕಿ ಮೃತಪಟ್ಟಾಗ ಪೊಲೀಸರಿಗೆ ಸಂದೇಹಾಸ್ಪದವಾದ ಏನನ್ನೂ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಪೊಲೀಸರು ಅಸಹಜ ಸಾವೆಂದು ಕೇಸು ದಾಖಲಿಸಿದ್ದರುಎಂದು ಮುಖ್ಯಮಂತ್ರಿ ಹೇಳಿದರು. ಆದರೆ ಮೊದಲ ಬಾಲಕಿ ಲೈಂಗಿಕ ಕಿರುಕುಳಕ್ಕೊಳಗಾಗಿದ್ದಾಳೆಂದು ಈಗ ಸ್ಪಷ್ಟವಾಗಿದೆ. ಎರಡು ಕೇಸುಗಳಲ್ಲಿ ಈಗ ಸೂಕ್ತರೀತಿಯಲ್ಲಿ ತನಿಖೆ ನಡೆಸಲಾಗುತ್ತಿದೆ.

ಅಪರಾಧಿಗಳು ಖಂಡಿತಾ ಪಾರಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮುಖ್ಯಮಂತ್ರಿ ಕೇರಳ ವಿಧಾಸಭೆಗೆ ಭರವಸೆ ನೀಡಿದರು. ಮಹಿಳಾ ಸುರಕ್ಷೆಯ ಕುರಿತು ಕೇಳಲಾದ ಪ್ರಶ್ನೆಗೆ ಅವರು ಸದನದಲ್ಲಿ ಉತ್ತರಿಸುತ್ತಿದ್ದರು.

ಈಗಾಗಲೇ ವಾಳಯಾರಿನಲ್ಲಿ ನಿಗೂಢವಾಗಿ ಮೃತರಾದ ಇಬ್ಬರು ಅಪ್ರಾಪ್ತ ಸಹೋದರಿಯರು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆಂದು ಮೇಲ್ನೋಟಕ್ಕೆ ಪತ್ತೆಯಾಗಿದೆ. 13 ವರ್ಷದ ಬಾಲಕಿ ಜನವರಿ 13ಕ್ಕೆ ಮತ್ತು ಒಂಬತ್ತು ವರ್ಷವಯಸ್ಸಿನ ಅವಳ ತಂಗಿ ಮಾರ್ಚ್ ನಾಲ್ಕಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಘಟನೆಗೆ ಸಂಬಂಧಿಸಿ ಅಪ್ರಾಪ್ತ ಸಹೋದರಿಯರ ಸಂಬಂಧಿಕರ ಸಹಿತ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಪ್ರಶ್ನಿಸುತ್ತಿದ್ದಾರೆ. ಇವರಲ್ಲಿ ಒಬ್ಬನ ಮೊಬೈಲ್ ಫೋನ್‌ನಲ್ಲಿ ಬಾಲಕಿಯರ ಅತ್ಯಾಚಾರ ಮಾಡುವ ದೃಶ್ಯಗಳು ಲಭಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಇಬ್ಬರು ಬಾಲಕಿಯರಿಗೂ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಗಳು ಸಮ್ಮತಿಸಿದ್ದಾರೆ. ಅವರನ್ನು ಆರೋಪಿಗಳೇ ಕೊಂದು ಹಾಕಿದ್ದರೇ ಎಂದು ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.

ವಾಳಯಾರಿನಲ್ಲಿ ನಡೆದ ಅಪ್ರಾಪ್ತ ಬಾಲಕಿಯರ ನಿಗೂಢ ಸಾವಿನ ಘಟನೆಯನ್ನು ಮುಂದಿಟ್ಟು ಪ್ರತಿಪಕ್ಷ ರಾಜ್ಯದಲ್ಲಿ ಮಹಿಳಾ ಸುರಕ್ಷಿತತೆಯ ಕುರಿತು ಚರ್ಚೆ ನಡೆಸಬೇಕೆಂದು ಸದನದಲ್ಲಿ ವಾದಿಸಿವೆ. ಸದನ ಸ್ಥಗಿತ ಗೊಳಿಸಿ ಮಹಿಳಾ ಸುರಕ್ಷಿತತೆಯ ವಿಚಾರ ಚರ್ಚಿಸಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿವೆ. ಶಾಸಕ ಕೆ. ಮುರಳೀಧರನ್‌ರು ಪ್ರಸ್ತಾವ ಮಂಡಿಸಿ ಚರ್ಚೆಗೆ ಅನುಮತಿ ಯಾಚಿಸಿದ್ದಾರೆ.

ವಾಳಯಾರಿನಲ್ಲಿ ಮೊದಲು ಘಟನೆಯಲ್ಲಿ ಪೊಲೀಸರು ಸರಿಯಾದ ರೀತಿ ತನಿಖೆ ನಡೆಸಿದ್ದರೆ ಎರಡನೆ ಘಟನೆ ನಡೆಯುತ್ತಿರಲಿಲ್ಲ. ಮೊದಲ ಬಾಲಕಿಯ ಒಂಬತ್ತು ವರ್ಷದ ತಂಗಿ ಸಾಯುವ ಸನ್ನಿವೇಶವೇ ಸೃಷ್ಟಿಯಾಗುತ್ತಿರಲಿಲ್ಲ ಎಂದು ಕೆ. ಮುರಳೀಧರನ್ ಸದನದಲ್ಲಿ ಹೇಳಿದ್ದಾರೆ.ಪೊಲೀಸರಿಂದ ಬಹುದೊಡ್ಡ ಲೋಪವಾಗಿದೆ ಎಂದು ಕೆ. ಮುರಳೀಧರನ್ ಆರೋಪಿಸಿದ್ದಾರೆ.

ಮಹಿಳೆಯರ ವಿರುದ್ಧ ಲೈಂಗಿಕ ಅಕ್ರಮಗಳು ಇತ್ತೀಚೆಗೆ ಹೆಚ್ಚುತ್ತಿದ್ದು, ಇದು ಕೇರಳದ ಸಾಮಾಜಿಕ ಜೀವನದಲ್ಲಿ ದುಷ್ಪರಿಣಾಮ ಬೀರುತ್ತಿದೆ ಎಂದು ಸ್ಪೀಕರ್ ಶ್ರೀರಾಮಕೃಷ್ಣನ್ ಹೇಳಿದರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News