ದೇಶದ್ರೋಹಿಯ ಶವವನ್ನು ಸ್ವೀಕರಿಸುವುದಿಲ್ಲ: ಹತ ಶಂಕಿತ ಭಯೋತ್ಪಾದಕನ ತಂದೆ

Update: 2017-03-08 11:38 GMT

ಲಕ್ನೋ,ಮಾ.8: ಲಕ್ನೋ ಬಳಿ ಮಂಗಳವಾರ ನಡೆದ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟಿರುವ ಶಂಕಿತ ಭಯೋತ್ಪಾದಕ ಸೈಫುಲ್ಲಾನ ಶವವನ್ನು ಸ್ವೀಕರಿಸಲು ಆತನ ತಂದೆ,ಕಾನ್ಪುರ ನಿವಾಸಿ ಸರ್ತಾಜ್ ನಿರಾಕರಿಸಿದ್ದಾರೆ.‘‘ದೇಶದ್ರೋಹಿಯೋರ್ವ ನಮ್ಮ ಮಗನಾಗಿರಲು ಸಾಧ್ಯವಿಲ್ಲ. ನಾವು ಭಾರತೀಯರು, ನಾವು ಇಲ್ಲಿಯೇ ಹುಟ್ಟಿದ್ದು, ನಮ್ಮ ಪೂರ್ವಜರೂ ಇಲ್ಲಿಯೇ ಹುಟ್ಟಿದ್ದರು. ದೇಶವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿ ನಮ್ಮ ಮಗನಾಗಿರಲು ಸಾಧ್ಯವಿಲ್ಲ. ನಾವು ಅವನ ಶವವನ್ನು ಸ್ವೀಕರಿಸುವುದಿಲ್ಲ ’’ ಎಂದು ಬುಧವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸರ್ತಾಜ್ ಸ್ಪಷ್ಟಪಡಿಸಿದರು.

 ಸೈಫುಲ್ಲಾ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದ ಎನ್ನುವುದು ತನಗೆ ತಿಳಿದಿರಲಿಲ್ಲ ಎಂದರು.

 ನೂತನವಾಗಿ ರಚನೆಯಾಗಿದ್ದ ಐಸಿಸ್ ಘಟಕದ ಒಂಭತ್ತು ಸದಸ್ಯರಲ್ಲಿ ಸೈಫುಲ್ಲಾ ಓರ್ವನಾಗಿದ್ದ ಎನ್ನಲಾಗಿದೆ.ಆತ ಲಕ್ನೋದ ಹೊರವಲಯದಲ್ಲಿರುವ ಮನೆಯೊಂದರಲ್ಲಿ ಅಡಗಿದ್ದಾನೆ ಎಂಬ ಮಾಹಿತಿ ಪಡೆದಿದ್ದ ಕಮಾಂಡೋಗಳು ನಿನ್ನೆ ಮಧ್ಯಾಹ್ನ ಮೂರು ಗಂಟೆಯಿಂದಲೇ ಮುತ್ತಿಗೆ ಹಾಕಿದ್ದರು. ಸತತ 12 ಗಂಟೆಗಳ ಕಾರ್ಯಾಚರಣೆಯ ಬಳಿಕ ಬುಧವಾರ ನಸುಕಿನಲ್ಲಿ ಸೈಪುಲ್ಲಾ ಕೊಲ್ಲಲ್ಪಟ್ಟಿದ್ದ. ಆತನನ್ನು ಜೀವಂತವಾಗಿ ಸೆರೆ ಹಿಡಿಯುವ ಕಮಾಂಡೋಗಳ ಪ್ರಯತ್ನ ವಿಫಲಗೊಂಡಿತ್ತು. ಅವರ ಸೂಚನೆಯಂತೆ ಸೋದರ ಸೈಫುಲ್ಲಾ ಜೊತೆ ಮೊಬೈಲ್ ಫೋನ್‌ನಲ್ಲಿ ಮಾತನಾಡಿ ಶರಣಾಗುವಂತೆ ಕೋರಿದ್ದ. ಆತನ ಕೋರಿಕೆಯನ್ನು ನಿರಾಕರಿಸಿದ್ದ ಸೈಫುಲ್ಲಾ, ತಾನು ಹುತಾತ್ಮನಾಗಲು ಬಯಸಿದ್ದೇನೆ ಎಂದು ಹೇಳಿದ್ದ. ಆತ ಅಡಗಿಕೊಂಡಿದ್ದ ಮನೆಯನ್ನು ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿಯೋರ್ವ ಬಾಡಿಗೆಗೆ ಪಡೆದುಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.

ಐಸಿಸ್ ಘಟಕದ ಎಲ್ಲ ಒಂಬತ್ತೂ ಸದಸ್ಯರು ಆನ್‌ಲೈನ್‌ನಲ್ಲಿ ಐಸಿಸ್‌ನ ಪ್ರಚಾರ ಅಭಿಯಾನಕ್ಕೆ ಮರುಳಾಗಿ ಚಾಟ್ ರೂಮ್‌ಗಳ ಮೂಲಕ ಭೇಟಿಯಾಗಿದ್ದರು. ಎಲ್ಲರೂ 20-25 ವರ್ಷ ಹರೆಯದವರಾಗಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News