×
Ad

ಕುವೈತ್‌ನಲ್ಲಿ 36 ಕಿಲೋಮೀಟರ್ ಉದ್ದದ ಸೇತುವೆ ನಿರ್ಮಾಣ

Update: 2017-03-08 20:10 IST

ಕುವೈತ್ ಸಿಟಿ, ಮಾ. 8: ಕುವೈತ್ ತನ್ನ ದುರ್ಗಮ ಉತ್ತರ ಭಾಗದಲ್ಲಿ ಸುದೀರ್ಘ ಸೇತುವೆಯೊಂದನ್ನು ನಿರ್ಮಿಸುತ್ತಿದೆ. ಪ್ರಾಚೀನ ‘ರೇಷ್ಮೆ ಮಾರ್ಗ’ ವ್ಯಾಪಾರಕ್ಕೆ ಮರುಜೀವ ನೀಡುವ ಉದ್ದೇಶದಿಂದ ಕುವೈತ್ ಅಲ್ಲಿ ‘ಸಿಲ್ಕ್ ನಗರ’ವನ್ನು ನಿರ್ಮಿಸುತ್ತಿದ್ದು ಅದಕ್ಕಾಗಿ ಈ 36 ಕಿಲೋಮೀಟರ್ ಉದ್ದದ ಸೇತುವೆಯನ್ನು ನಿರ್ಮಿಸಲಾಗುತ್ತಿದೆ ಹಾಗೂ ಇದಕ್ಕಾಗಿ ಭಾರೀ ಮೊತ್ತದ ಹಣವನ್ನು ಅಲ್ಲಿ ಹೂಡಿಕೆ ಮಾಡುತ್ತಿದೆ.

ದೇಶದ ಉತ್ತರದ ತುದಿಯಲ್ಲಿರುವ ಜನವಾಸವಿಲ್ಲದ ಸುಬ್ಬಿಯ ವಲಯಕ್ಕೆ ಜೀವ ತುಂಬಲು ತೈಲ ಸಂಪದ್ಭರಿತ ಅಮೀರಶಾಹಿ ಉತ್ಸುಕವಾಗಿದೆ. ಇಲ್ಲಿ ಸಿಲ್ಕ್ ನಗರವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ಕೊಲ್ಲಿಯನ್ನು ಮಧ್ಯ ಏಶ್ಯ ಮತ್ತು ಯುರೋಪ್‌ನೊಂದಿಗೆ ಸಂಪರ್ಕಿಸಿ ಬೃಹತ್ ಮುಕ್ತ ವ್ಯಾಪಾರ ವಲಯವೊಂದನ್ನು ಸ್ಥಾಪಿಸುವ ಮೂಲಕ ಪ್ರಾಚೀನ ರೇಷ್ಮೆ ಮಾರ್ಗಕ್ಕೆ ಮರುಜೀವ ತುಂಬುವುದು ಯೋಜನೆಯ ಉದ್ದೇಶವಾಗಿದೆ.

36 ಕಿಲೋಮೀಟರ್ ಉದ್ದದ ಸೇತುವೆಯ ಮುಕ್ಕಾಲು ಭಾಗ ನೀರಿನಲ್ಲಿ ಹಾದು ಹೋಗುತ್ತದೆ. ಇದು ಕುವೈತ್ ಸಿಟಿ ಮತ್ತು ಸುಬ್ಬಿಯದ ಪ್ರಯಾಣ ಸಮಯವನ್ನು ಈಗಿನ 90 ನಿಮಿಷಗಳಿಂದ 20-25 ನಿಮಿಷಗಳಿಗೆ ತಗ್ಗಿಸುತ್ತದೆ.

ಸಿಲ್ಕ್ ಸಿಟಿ ಯೋಜನೆ ಪೂರ್ಣಗೊಳ್ಳಲು 100 ಬಿಲಿಯ ಡಾಲರ್ (ಸುಮಾರು 6,67,239 ಕೋಟಿ ರೂಪಾಯಿ) ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಈ ಉದ್ದೇಶಕ್ಕಾಗಿ ಸುಬ್ಬಿಯದಲ್ಲಿ 5,000 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರವೊಂದನ್ನು ನಿರ್ಮಿಸಲಾಗಿದೆ.

ಸೇತುವೆಯನ್ನು 904 ಮಿಲಿಯ ದೀನಾರ್ (ಸುಮಾರು 20,017 ಕೋಟಿ ರೂಪಾಯಿ) ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, 2006 ಜನವರಿಯಲ್ಲಿ ನಿಧನರಾದ ಅಮೀರ್ ಶೇಖ್ ಜಬ್ಬರ್ ಅಲ್-ಅಹ್ಮದ್ ಅಲ್-ಸಬಾಹ್‌ರ ಹೆಸರನ್ನು ಇಡಲಾಗಿದೆ.

ಸೇತುವೆಯ ಮುಕ್ಕಾಲು ಭಾಗ ಕಾಮಗಾರಿ ಈಗಾಗಲೇ ಮುಕ್ತಾಯಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News