ಖಲಿಸ್ತಾನ್ ಚಳವಳಿಯಲ್ಲಿ ಭಯೋತ್ಪಾದಕ ದಾಳಿ ಸಂಚು ರೂಪಿಸಿದ್ದ ಭಾರತೀಯನಿಗೆ 15 ವರ್ಷಗಳ ಜೈಲುಶಿಕ್ಷೆ
ನ್ಯೂಯಾರ್ಕ್,ಮಾ.8: ಸ್ವತಂತ್ರ ಸಿಖ್ ದೇಶ ರಚನೆಗೆ ಖಲಿಸ್ಥಾನ್ ಚಳವಳಿಯ ಭಾಗವಾಗಿ ಭಾರತೀಯ ಸರಕಾರಿ ಅಧಿಕಾರಿಯ ಹತ್ಯೆ ಸೇರಿದಂತೆ ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಸಂಚು ರೂಪಿಸಿದ್ದಕ್ಕಾಗಿ ಭಾರತೀಯ ಪ್ರಜೆ ಬಲ್ವಿಂದರ್ ಸಿಂಗ್ (42) ಎಂಬಾತನಿಗೆ ಇಲ್ಲಿಯ ರೆನೋ ನ್ಯಾಯಾಲಯವು ಮಂಗಳವಾರ 15 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ.
ಬಲ್ವಿಂದರ್ ಸಿಂಗ್ ಅಲಿಯಾಸ್ ಝಾಜಿ ಅಲಿಯಾಸ್ ಬಲ್ಜಿತ್ ಸಿಂಗ್ ರೆನೋ ನಿವಾಸಿಯಾಗಿದ್ದು ಎರಡು ಭಯೋತ್ಪಾದಕ ಗುಂಪುಗಳ ಸದಸ್ಯನಾಗಿದ್ದ ಮತ್ತು ಭಾರತ ಸರಕಾರಕ್ಕೆ ಬೆದರಿಕೆಯೊಡ್ಡಲು ಹಾಗೂ ಭಯೋತ್ಪಾದಕ ಗುಂಪುಗಳ ಹೋರಾಟವನ್ನು ಬೆಂಬಲಿಸದ ವ್ಯಕ್ತಿಗಳಿಗೆ ಹಾನಿಯನ್ನುಂಟು ಮಾಡಲು ಅಗತ್ಯ ನೆರವನ್ನು ಒದಗಿಸಿದ್ದ ಎಂದು ನೆವಾಡಾ ಜಿಲ್ಲೆಯ ಸರಕಾರಿ ವಕೀಲ ಡೇನಿಯಲ್ ಬೊಗ್ದೇನ್ ಹೇಳಿದರು.
ಅಮೆರಿಕ ಮತ್ತು ಅದರ ಮಿತ್ರದೇಶಗಳನ್ನು ಭಯೋತ್ಪಾದಕ ಕೃತ್ಯಗಳಿಂದ ರಕ್ಷಿಸಲು ಹಲವಾರು ಕಾನೂನು ಜಾರಿ ಸಂಸ್ಥೆಗಳು ಒಂದಾಗಿ ಶ್ರಮಿಸುತ್ತಿವೆ ಎನ್ನುವುದಕ್ಕೆ ಈ ಪ್ರಕರಣವು ಉದಾಹರಣೆಯಾಗಿದೆ ಎಂದೂ ಅವರು ತಿಳಿಸಿದರು.
ಭಾರತೀಯ ಪ್ರಜೆಯಾಗಿರುವ ಸಿಂಗ್ ಖಾಯಂ ಅಮೆರಿಕ ನಿವಾಸಿಯಾಗಿದ್ದ. ಕಳೆದ ವರ್ಷದ ನವೆಂಬರ್‌ನಲ್ಲಿ ಆತ ನ್ಯಾಯಾಲಯದಲಿ ತನ್ನ ತಪ್ಪು ಒಪ್ಪಿಕೊಂಡಿದ್ದ.
2013,ಸೆಪ್ಟೆಂಬರ್ ಮತ್ತು ಡಿಸೆಂಬರ್ ನಡುವೆ ಸಿಂಗ್ ಭಯೋತ್ಪಾದಕ ದಾಳಿಗಳನ್ನು ಬೆಂಬಲಿಸುವ ಸಂಚು ರೂಪಿಸಿದ್ದ. ದಕ್ಷಿಣ ಏಷ್ಯಾಕ್ಕೆ ಸಹ ಸಂಚುಕೋರನ ಪ್ರವಾಸಕ್ಕೆ ಸೌಲಭ್ಯ,ಹಣಕಾಸು ನೆರವು ಮತ್ತು ದಾಳಿಯನು ನಡೆಸಲು ಅಗತ್ಯ ಸಾಮಗ್ರಿಗಳನ್ನು ಒದಗಿಸಲು ಆತ ಒಪ್ಪಿಕೊಂಡಿದ್ದ. ಸಹ ಸಂಚುಕೋರನನ್ನು ಮುಖತಃ ಭೇಟಿಯಾಗಲು ರೆನೋದಿಂದ ಕ್ಯಾಲಿಫೋರ್ನಿಯಾಕ್ಕೂ ಆತ ಪ್ರಯಾಣಿಸಿದ್ದ ಎಂದು ದೋಷಾರೋಪಣ ಪಟ್ಟಿಯಲ್ಲಿ ಹೇಳಲಾಗಿತ್ತು.
ಎರಡು ಸೆಟ್ ರಾತ್ರಿ ಗೋಚರತೆಯ ಗಾಗಲ್‌ಗಳು, ಲ್ಯಾಪ್‌ಟಾಪ್‌ಗಳನ್ನು ಖರೀದಿಸಿದ್ದ ಸಿಂಗ್ ಅವುಗಳನ್ನು ಯೋಜಿತ ಭಯೋತ್ಪಾದಕ ದಾಳಿಗಳನ್ನು ನಡೆಸಲಿದ್ದ ಸಹ ಸಂಚುಕೋರನಿಗೆ ನೀಡಿದ್ದ. ಆದರೆ ಸಹ ಸಂಚುಕೋರ 2013,ಡಿಸೆಂಬರ್‌ನಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಿಂದ ಬ್ಯಾಂಕಾಕ್‌ಗೆ ವಿಮಾನವನ್ನೇರಲು ಪ್ರಯತ್ನಿಸುತ್ತಿದ್ದಾಗ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ.