ಟವಿಯನ್ನೇ ಗುಪ್ತ ಮೈಕ್ರೋಫೋನ್ ಮಾಡುವ ಸಿಐಎ ವಿಧಾನಗಳು ಬಹಿರಂಗ : ವಿಕಿಲೀಕ್ಸ್!

Update: 2017-03-08 16:38 GMT

ವಾಶಿಂಗ್ಟನ್, ಮಾ. 8: ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎ ನಿಮ್ಮ ಟಿವಿಯನ್ನೇ ಕದ್ದಾಲಿಸುವ ಸಾಧನವನ್ನಾಗಿ ಪರಿವರ್ತಿಸಬಹುದು, ಪ್ರಸಿದ್ಧ ಎನ್‌ಕ್ರಿಪ್ಶನ್ (ಅಕ್ಷರಗಳನ್ನು ಸಂಕೇತಗಳನ್ನಾಗಿ ಮಾಡುವುದು) ಆ್ಯಪ್‌ಗಳನ್ನೇ ಯಾಮಾರಿಸಬಹುದು ಹಾಗೂ ಹೆಚ್ಚೇಕೆ, ನಿಮ್ಮ ಕಾರುಗಳನ್ನೇ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು!

ವಿಕಿಲೀಕ್ಸ್ ಮಂಗಳವಾರ ಬಿಡುಗಡೆ ಮಾಡಿದ ಸಿಐಎಯ ದಾಖಲೆಗಳೇ ಇದಕ್ಕೆ ಸಾಕ್ಷಿ.

ಸೆಂಟ್ರಲ್ ಇಂಟಲಿಜನ್ಸ್ ಏಜೆನ್ಸಿ (ಸಿಐಎ)ಯಿಂದ ಸೋರಿಕೆಯಾಗಿದೆಯೆಂದು ಹೇಳಲಾದ ಸುಮಾರು 9,000 ದಾಖಲೆಗಳನ್ನು ವಿಕಿಲೀಕ್ಸ್ ಬಿಡುಗಡೆ ಮಾಡಿದೆ. ಇದು ಸಿಐಎಗೆ ಸಂಬಂಧಿಸಿದ ಈವರೆಗಿನ ಅತೀ ದೊಡ್ಡ ಸೋರಿಕೆಯೆಂದು ಹೇಳಲಾಗಿದೆ.

ಸಿಐಎಯ ಭಾರೀ ಪ್ರಮಾಣದ ದಾಖಲೆಗಳು, ಕನ್ನ ಸಾಧನಗಳು ಮತ್ತು ಕನ್ನ ಹಾಕುವುದಕ್ಕಾಗಿ ಬಳಸುವ ಗುಪ್ತ ಸಂಕೇತಗಳು (ಕೋಡ್) ಸೈಬರ್ ಸೆಕ್ಯುರಿಟಿ ಕಮ್ಯುನಿಟಿಯ ಒಳಗೆ ಸೋರಿಕೆಯಾಗಿದ್ದು, ಅದು ತನಗೆ ಲಭಿಸಿದೆ ಹಾಗೂ ಅದರ ಒಂದು ಭಾಗವನ್ನು ಬಿಡುಗಡೆ ಮಾಡಿರುವುದಾಗಿ ವಿಕಿಲೀಕ್ಸ್ ಹೇಳಿದೆ.

''ಸಿಐಎಯ ಇಡೀ ಕನ್ನ ಸಾಮರ್ಥ್ಯವು ಈ ಹಲವು ನೂರು ಕೋಟಿ ಸಾಲುಗಳ ಕೋಡ್‌ಗಳಲ್ಲಿ ಅಡಗಿದೆ'' ಎಂದು ಅದು ಹೇಳಿದೆ. ಸೈಬರ್ ಶಸ್ತ್ರಗಳ ಪ್ರಸರಣದ ಅಪಾಯವನ್ನು ಈ ಸೋರಿಕೆ ಹುಟ್ಟು ಹಾಕಿದೆ ಎಂದಿದೆ.

ಸೋರಿಕೆಯಾದ ದಾಖಲೆಗಳು ನೈಜವೇ ಎನ್ನುವುದನ್ನು ಖಚಿತಪಡಿಸಲು ಸಿಐಎ ಮತ್ತು ಶ್ವೇತಭವನಗಳು ನಿರಾಕರಿಸಿವೆ.

1,000 ಮಾಲ್‌ವೇರ್‌ಗಳು

ಸಿಐಎಯು 1,000ಕ್ಕೂ ಅಧಿಕ ವೈರಸ್, ಟ್ರೋಜನ್ ಮತ್ತು ಇತರ ಕಳ್ಳ ಸಾಫ್ಟ್‌ವೇರ್ (ಮಾಲ್‌ವೇರ್)ಗಳನ್ನು ನಿರ್ಮಿಸಿದೆ ಹಾಗೂ ಅವುಗಳನ್ನು ಖಾಸಗಿ ಇಲೆಕ್ಟ್ರಾನಿಕ್ಸ್ ಸಾಧನಗಳಿಗೆ ಕಳುಹಿಸಿ ಅವುಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾಗಿದೆ ಎಂದು ವಿಕಿಲೀಕ್ಸ್ ಹೇಳಿದೆ.

ಈ ಕನ್ನ ಸಾಧನಗಳು ಐಫೋನ್‌ಗಳು, ಆ್ಯಂಡ್ರಾಯ್ಡಾ ಸಾಧನಗಳು, ಮೈಕ್ರೊಸಾಫ್ಟ್ ಸಾಫ್ಟ್‌ವೇರ್, ಸ್ಯಾಮ್ಸಂಗ್ ಸ್ಮಾರ್ಟ್ ಟಿವಿಗಳನ್ನು ಗುರಿಯಾಗಿಸುತ್ತವೆ ಹಾಗೂ ಅವುಗಳನ್ನು ಗುಪ್ತ ಮೈಕ್ರೊಫೋನ್‌ಗಳನ್ನಾಗಿ ಪರಿವರ್ತಿಸುತ್ತವೆ ಎಂದು ವಿಕಿಲೀಕ್ಸ್ ತಿಳಿಸಿದೆ.

 ಸಿಐಎಯು ತನ್ನ ಕನ್ನ ಸಾಧನಗಳನ್ನು ಬಳಸಿ, ಕಾರುಗಳು ಮತ್ತು ಟ್ರಕ್‌ಗಳಲ್ಲಿರುವ ಇಲೆಕ್ಟ್ರಾನಿಕ್ ನಿಯಂತ್ರಣ ವ್ಯವಸ್ಥೆಗಳ ಮೇಲೆಯೂ ಕನ್ನ ಹಾಕಬಹುದಾಗಿದೆ ಹಾಗೂ ಅವುಗಳನ್ನು ದೂರದಿಂದಲೇ ನಿಯಂತ್ರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News