×
Ad

ಪಾಲಕ್ಕಾಡ್: ಪೆಪ್ಸಿಕೋದಿಂದ ಅಂತರ್ಜಲ ಬಳಕೆ ನಿರ್ಬಂಧಕ್ಕೆ ಕೇರಳ ಚಿಂತನೆ

Update: 2017-03-08 22:58 IST

ತಿರುವನಂತಪುರಂ, ಮಾ.8: ರಾಜ್ಯದಲ್ಲಿ ತೀವ್ರ ಬರಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ಬಹುರಾಷ್ಟ್ರೀಯ ಲಘುಪಾನೀಯ ಸಂಸ್ಥೆ ಪೆಪ್ಸಿಕೋದ ಪಾಲಕ್ಕಾಡ್ ಘಟಕವು ಅಂತರ್ಜಲವನ್ನು ಯಥೇಚ್ಛವಾಗಿ ಬಳಸಿಕೊಳ್ಳುತ್ತಿರುವುದನ್ನು ನಿರ್ಬಂಧಿಸುವುದಾಗಿ ಕೇರಳ ಸರಕಾರ ಬುಧವಾರ ತಿಳಿಸಿದೆ.
ಜಲಸಂಪನ್ಮೂಲ ಸಚಿವ ಮ್ಯಾಥ್ಯೂ ಟಿ. ಥಾಮಸ್ ಕೇರಳ ವಿಧಾನಸಭೆಯಲ್ಲಿ ಈ ವಿಷಯ ತಿಳಿಸಿದ್ದು, ಸಾಧ್ಯವಾದಲ್ಲಿ ರಾಜ್ಯ ವಿಪತ್ತು ನಿರ್ವಹಣೆ ಕಾಯ್ದೆಯಡಿ ಸರಕಾರವು ತನಗಿರುವ ಅಧಿಕಾರವನ್ನು ಬಳಸಿಕೊಂಡು, ಸರಕಾರವು ಪಾಲಕ್ಕಾಡ್‌ನ ಪುದುಶ್ಸೇರಿಯಲ್ಲಿರುವ ಪೆಪ್ಸಿಕೋ ಘಟಕವು ಅಂತರ್ಜಲವನ್ನು ಬಳಸಿಕೊಳ್ಳುವುದನ್ನೇ ನಿಲ್ಲಿಸಲಿದೆಯೆಂದು ಹೇಳಿದ್ದಾರೆ.
ಬರಗಾಲದಂತಹ ಈ ವಿಶೇಷ ಸನ್ನಿವೇಶದಲ್ಲಿ ಪೆಪ್ಸಿಕೊ ಕಂಪೆನಿಯು ನೀರಿನ ಬಳಕೆಯನ್ನು ಕಡಿಮೆಗೊಳಿಸಬೇಕು ಹಾಗೂ ಸರಕಾರವು ಈ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆಯೆಂದು ಅವರು ಹೇಳಿದರು. ಅಂತರ್ಜಲದ ಬಳಕೆಯನ್ನು ಶೇ.75ರಷ್ಟು ಕಡಿಮೆಗೊಳಿಸುವಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈಗಾಗಲೇ ಪೆಪ್ಸಿಕೋ ಸಂಸ್ಥೆಗೆ ನೋಟಿಸ್ ಜಾರಿಗೊಳಿಸಿದೆ. ಕಂಪೆನಿ ಕೂಡಾ ಫೆಬ್ರವರಿ 3ರಿಂದ ತಾನು ನೀರಿನ ಬಳಕೆಯನ್ನು ಪ್ರತಿದಿನ 1.5 ಲಕ್ಷ ಲೀಟರ್‌ಗಳಷ್ಟು ಕಡಿಮೆಗೊಳಿಸಿರುವುದಾಗಿ ತಿಳಿಸಿದೆ. ಕಂಪೆನಿಯು ಏಳು ಕೊಳವೆಬಾವಿಗಳನ್ನು ಹೊಂದಿದ್ದು, ಪ್ರತಿದಿನವೂ ಅದು 6.5 ಲಕ್ಷ ಲೀಟರ್ ನೀರನ್ನು ಬಳಸಿಕೊಳ್ಳುತ್ತಿದೆ.
ಲಘುಪಾನೀಯ ತಯಾರಿಕಾ ಸಂಸ್ಥೆ ಪೆಪ್ಸಿಕೋ, ಅಂತರ್ಜಲವನ್ನು ವಿಪರೀತವಾಗಿ ಬಳಸಿಕೊಳ್ಳುವುದನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳಬೇಕೆಂದು ಕೋರಿ ಸಿಪಿಎಂನ ಹಿರಿಯ ನಾಯಕ ಹಾಗೂ ರಾಜ್ಯ ಆಡಳಿತಾತ್ಮಕ ಸುಧಾರಣೆಗಳ ಸಮಿತಿಯ ಅಧ್ಯಕ್ಷ ವಿ.ಎಸ್.ಅಚ್ಯುತಾನಂದನ್ ಅವರ ಬೇಡಿಕೆಗೆ ಥಾಮಸ್ ಉತ್ತರಿಸುತ್ತಿದ್ದರು.
ಪಾಲಕ್ಕಾಡ್ ಜಿಲ್ಲೆಯು ಈ ವರ್ಷ ಎಂದೂ ಕಂಡರಿಯದಂತಹ ಭೀಕರ ಬರದಿಂದ ಪೀಡಿತವಾಗಿದೆಯೆಂದು ಅಚ್ಯುತಾನಂದನ್ ತಿಳಿಸಿದ್ದಾರೆ. ಪೆಪ್ಸಿಕೋ ಅಂತರ್ಜಲವನ್ನು ಮಿತಿಮೀರಿ ಬಳಸಿಕೊಳ್ಳುತ್ತಿದೆಯೆಂದು ಆರೋಪಿಸಿ, ಸ್ಥಳೀಯರು ಇತ್ತೀಚೆಗೆ ಧರಣಿ ನಡೆಸಿದ್ದರು. ಕೇರಳದ ಪ್ರಮುಖ ಜಲಾಶಯಗಳ ನೀರಿನ ಮಟ್ಟವೂ ಕುಸಿದಿದ್ದು, ಸರಕಾರವು ಕಳೆದ ಅಕ್ಟೋಬರ್‌ನಲ್ಲಿಯೇ ರಾಜ್ಯವನ್ನು ಬರಪೀಡಿತವೆಂದು ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News