×
Ad

ಕೇವಲ ಐದು ತಿಂಗಳಲ್ಲಿ 23 ಪಟ್ಟು ಹೆಚ್ಚಿದ ಚಂದ್ರಬಾಬು ಪುತ್ರನ ಆಸ್ತಿ!

Update: 2017-03-08 23:00 IST

ಹೈದರಾಬಾದ್, ಮಾ.8: ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಪುತ್ರ ಹಾಗೂ ತೆಲುಗು ದೇಶಂ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರ ಆಸ್ತಿಗಳ ವೌಲ್ಯ ಕೇವಲ ಐದೇ ತಿಂಗಳುಗಳಲ್ಲಿ 23 ಪಟ್ಟುಗಳಷ್ಟು ಹೆಚ್ಚಾಗಿದೆ. ಅವರೀಗ 330 ಕೋ.ರೂ.ವೌಲ್ಯದ ಆಸ್ತಿಗಳ ಒಡೆಯ!

ಲೋಕೇಶ್ ಸೋಮವಾರ ಎಂಎಲ್‌ಸಿ ಸ್ಥಾನಕ್ಕೆ ತನ್ನ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಅಫಿದಾವತ್‌ನಲ್ಲಿ ತನ್ನ ಆಸ್ತಿಗಳ ಒಟ್ಟು ವೌಲ್ಯ ಸುಮಾರು 330 ಕೋ.ರೂ.ಗಳೆಂದು ಘೋಷಿಸಿದ್ದಾರೆ. ಇವುಗಳಲ್ಲಿ 273.84 ಕೋ.ರೂ.ವೌಲ್ಯದ ಹೆರಿಟೇಜ್ ಫುಡ್ಸ್‌ನ ಶೇರುಗಳು, 18 ಕೋ.ರೂ.ಗಳ ಸ್ಥಿರಾಸ್ತಿಗಳು ಮತ್ತು 38.52 ಕೋ.ರೂ. ವೌಲ್ಯದ ಹಿರಿಯರಿಂದ ಬಂದಿರುವ ಆಸ್ತಿಗಳು ಸೇರಿವೆ. ಜೊತೆಗೆ 6.27 ಕೋ.ರೂ.ಗಳ ಸಾಲವನ್ನೂ ಅವರು ಹೊಂದಿದ್ದಾರೆ.
ಲೋಕೇಶ್ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿಗಳ ವಿವರಗಳಿಗೂ 2016,ಅ.19ರಂದು ಅವರು ಬಹಿರಂಗಗೊಳಿಸಿದ್ದ ಆಸ್ತಿಗಳ ವಿವರಗಳಿಗೂ ಅಜಗಜಾಂತರವಿದೆ. ಪ್ರತಿ ವರ್ಷ ತನ್ನ ಕುಟುಂಬದ ಆಸ್ತಿ ವಿವರಗಳನ್ನು ಬಹಿರಂಗ ಗೊಳಿಸುವ ‘ಪಾರದರ್ಶಕತೆ ’ಯ ಪ್ರಕ್ರಿಯೆಯಲ್ಲಿ 2.52 ಕೋ.ರೂ.ವೌಲ್ಯದ ಹೆರಿಟೇಜ್ ಶೇರುಗಳು, 1.64 ಕೋ.ರೂ.ವೌಲ್ಯದ ಇತರ ಕಂಪನಿಗಳ ಶೇರುಗಳು ಮತ್ತು 93 ಲ.ರೂ. ವೌಲ್ಯದ ಕಾರು ಸೇರಿದಂತೆ ತನ್ನ ಆಸ್ತಿಗಳ ಒಟ್ಟು ವೌಲ್ಯ ಕೇವಲ 14.50 ಕೋ.ರೂ. ಎಂದು ಲೋಕೇಶ್ ಘೋಷಿಸಿದ್ದರು. ಅಲ್ಲದೆ ತಾನು 6.35 ಕೋ.ರೂ. ಸಾಲವನ್ನೂ ಹೊಂದಿದ್ದೇನೆ ಎಂದು ತಿಳಿಸಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News