ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಮುಸ್ಲಿಮ್ ಮಹಿಳೆಯ ಹಿಜಾಬ್‌ನ್ನು ಬಲವಂತದಿಂದ ತೆಗೆಸಿದರು......!

Update: 2017-03-08 18:04 GMT

ಅಹ್ಮದಾಬಾದ್,ಮಾ.8: ಬುಧವಾರ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮುಸ್ಲಿಮ್ ಮಹಿಳೆಯೋರ್ವರು ಧರಿಸಿದ್ದ ಹಿಜಾಬ್ (ಶಿರೋವಸ್ತ್ರ)ನ್ನು ಒತ್ತಾಯದಿಂದ ತೆಗೆಸಿದ ಘಟನೆ ನಡೆದಿದೆ.

  ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಗಾಂಧಿನಗರದಲ್ಲಿ ಆಯೋಜಿಸ ಲಾಗಿದ್ದ ಮಹಿಳಾ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮೋದಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕೇರಳದ ನಿಯೋಗವೊಂದು ಉಪಸ್ಥಿತವಿದ್ದು, ವಯನಾಡಿನ ಪಂಚಾಯತೊಂದರ ಅಧ್ಯಕ್ಷೆ ಶಹರ್ಬಾನ್ ಸೈದ್‌ಸಲಾವಿ ಅವರು ತನ್ನ ಪಂಚಾಯತ್ ವ್ಯಾಪ್ತಿಯ ಪ್ರದೇಶವನ್ನು ಬಯಲು ಶೌಚ ಮುಕ್ತವಾಗಿಸಿದ್ದಕ್ಕೆ ಆಹ್ವಾನಿತ ಸದಸ್ಯೆಯಾಗಿದ್ದರು. ತನ್ನ ಧಾರ್ಮಿಕ ಪದ್ಧತಿಯಂತೆ ಅವರು ಧರಿಸಿದ್ದ ಹಿಜಾಬ್ ಕಂಡ ಭದ್ರತಾಸಿಬ್ಬಂದಿಗಳು ಅದನ್ನು ಬಲವಂತದಿಂದ ತೆಗೆಸಿದ್ದಾರೆ. ಸುಮಾರು 6,000 ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಭದ್ರತಾ ಸಿಬ್ಬಂದಿಗಳು ಹಿಜಾಬ್‌ನ್ನು ತಮ್ಮಂದಿಗೆ ತೆಗೆದುಕೊಂಡು ಹೋಗಿದ್ದು, ಕಾರ್ಯಕ್ರಮದ ಉದ್ದಕ್ಕೂ ಸೈದ್‌ಸಲಾವಿ ಅದನ್ನು ಧರಿಸದೇ ಇರುವಂತಾಗಿತ್ತು ಎಂದು ಕೇರಳ ಮಹಿಳಾ ಆಯೋಗದ ಸದಸ್ಯೆ ನೂರ್‌ಬಿನಾಳ್ ರಶೀದ್ ತಿಳಿಸಿದರು.

ನಿಯೋಗ ಇತರ ಸದಸ್ಯೆಯರು ಹಸ್ತಕ್ಷೇಪ ಮಾಡಿದ ನಂತರವೇ ಒಂದು ಗಂಟೆಯ ಬಳಿಕ ಹಿಜಾಬ್‌ನ್ನು ಮರಳಿಸಲಾಗಿತ್ತು.

ಇದು ಅವಮಾನಕಾರಿ ಕೃತ್ಯವಾಗಿದೆ,ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮಹಿಳಾ ದಿನಾಚರಣೆಯಂದು ಅಲ್ಪಸಂಖ್ಯಾತ ಮಹಿಳೆಯನ್ನು ಹೀಗೆ ನಡೆಸಿಕೊಂಡಿರುವುದು ಅಮಾನವೀಯ ಎಂದು ರಶೀದ್ ಕಿಡಿಕಾರಿದರು.

ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದಿರುವ ಕೇರಳ ಮಹಿಳಾ ಆಯೋಗವು ಭದ್ರತಾ ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಮಹಿಳೆಯ ಗುರುತನ್ನು ಖಚಿತಪಡಿಸಿಕೊಳ್ಳಲು ಹಿಜಾಬ್ ತೆಗೆಸಲಾಗಿತ್ತು ಮತ್ತು ಈ ವೇಳೆ ಮಹಿಳಾ ಸಂಘಟಕಿ ಸ್ಥಳದಲ್ಲಿದ್ದರು ಎಂದು ಎಸ್‌ಪಿ ವೀರೇಂದ್ರ ಯಾದವ ಸಮಜಾಯಿಷಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News