×
Ad

ಸಲ್ಮಾನ್ ಖಾನ್ ಮುಂದಿನ ಬಿಡುಗಡೆ - ಹೊಸ ಸ್ಮಾರ್ಟ್ ಫೋನ್ !

Update: 2017-03-09 12:29 IST

ಹೊಸದಿಲ್ಲಿ, ಮಾ.9: ಸೂಪರ್ ಹಿಟ್ ಚಿತ್ರಗಳಾದ ಬಜರಂಗಿ ಭಾಯಿಜಾನ್ ಮತ್ತು ಸುಲ್ತಾನ್ ಇವುಗಳಿಂದ ಕೀರ್ತಿ ಶಿಖರದ ತುತ್ತ ತುದಿಗೇರಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂದಿನ ಬಿಡುಗಡೆಯೇನು ಗೊತ್ತೇ ? ಹೊಸ ಸ್ಮಾರ್ಟ್ ಫೋನ್ ! ಆಶ್ಚರ್ಯವಾಗುತ್ತಿದೆಯಲ್ಲವೇ ? ಆದರೆ ಇತ್ತೀಚಿಗಿನ ಹಲವಾರು ವಿದ್ಯಮಾನಗಳನ್ನು ಗಮನಿಸುವಾಗ ಸಲ್ಮಾನ್ ಅವರು ಸ್ಮಾರ್ಟ್ ಫೋನ್ ತಯಾರಿ ಕಂಪೆನಿಯೊಂದನ್ನು ಸ್ಥಾಪಿಸಲು ತೀರಾ ಉತ್ಸುಕರಾಗಿದ್ದಾರೆಂದು ತಿಳಿದು ಬರುತ್ತದೆ.

ಸಲ್ಮಾನ್ ಅವರು ಈಗಾಗಲೇ ಈ ಕಂಪೆನಿಗಾಗಿ ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿದ್ದು ತಮ್ಮ ತಂಡವನ್ನು ಮುನ್ನಡೆಸಲು ಸ್ಯಾಮ್ಸಂಗ್ ಮತ್ತು ಮೈಕ್ರೋಮ್ಯಾಕ್ಸ್ ನಂತಹ ಕಂಪೆನಿಗಳಲ್ಲಿ ಕೆಲಸ ಮಾಡಿ ಅನುಭವವಿರುವವರನ್ನು ಹುಡುಕುವ ಯತ್ನದಲ್ಲಿದ್ದಾರೆಂದು ಮೂಲಗಳು ತಿಳಿಸಿವೆ.

ಬೀಯಿಂಗ್ ಹ್ಯೂಮನ್ ಬಟ್ಟೆ ಬ್ರ್ಯಾಂಡನ್ನು ಹೊಂದಿರುವ ಸಲ್ಮಾನ್ ಅವರು ಬೀಯಿಂಗ್‌ಸ್ಮಾರ್ಟ್ ಟ್ರೇಡ್ ಮಾರ್ಕ್ ಗೆ ನೋಂದಣಿ ಮಾಡಿದ್ದು ರೂ.20,000ಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನನ್ನು ಅವರ ಕಂಪೆನಿ ತಯಾರಿಸಲಿದೆಯೆಂದು ಹೇಳಲಾಗುತ್ತಿದೆ.

ಭಾರತದ ಮಾರುಕಟ್ಟೆಯಲ್ಲಿರುವ ಪ್ರಮುಖ ಚೀನಾದ ಬ್ರ್ಯಾಂಡುಗಳಾದ ಒಪ್ಪೊ, ವಿವೊ ಹಾಗೂ ಕ್ಸಿಯೋಮಿಗೆ ಸಲ್ಮಾನ್ ಅವರ ಸ್ಮಾರ್ಟ್ ಫೋನ್ ಸವಾಲೊಡ್ಡಲಿದೆಯೆಂದು ಮೂಲಗಳು ತಿಳಿಸಿವೆ.

ಬೀಯಿಂಗ್ ಹ್ಯೂಮನ್ ಬಟ್ಟೆ ಬ್ರ್ಯಾಂಡಿನಂತೆಯೇ ಬೀಯಿಂಗ್‌ಸ್ಮಾರ್ಟ್ ಫೋನಿನ ಮಾರಾಟದ ಮುಖಾಂತರ ಸಿಕ್ಕ ಆದಾಯವನ್ನು ಸಲ್ಮಾನ್ ಅವರ ಬೀಯಿಂಗ್ ಹ್ಯೂಮನ್ ಫೌಂಡೇಶನ್ ಇದರ ಪರೋಪಕಾರಿ ಕಾರ್ಯಗಳಿಗಾಗಿ ಉಪಯೋಗಿಸಲಾಗುವುದು.

ಆರಂಭದಲ್ಲಿ ಬೀಯಿಂಗ್ ಹ್ಯೂಮನ್ ಸ್ಮಾರ್ಟ್ ಫೋನುಗಳನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡಲಾಗುವುದಾದರೆ ನಂತರದ ದಿನಗಳಲ್ಲಿ ಅವುಗಳನ್ನು ದೊಡ್ಡ ರಿಟೇಲ್ ಸ್ಟೋರುಗಳಲ್ಲಿ ಮಾರಾಟ ಮಾಡಲಾಗುವುದು.

ಕಂಪೆನಿಯ ಪ್ರಮುಖ ಷೇರುದಾರರಾಗಿ ಸಲ್ಮಾನ್ ಇದ್ದರೆ ಸದ್ಯ ಅವರು ಹೂಡಿಕೆದಾರರನ್ನು ಹುಡುಕುವ ಯತ್ನದಲ್ಲಿದ್ದಾರೆಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News