ನೂತನ ಮುಸ್ಲಿಮ್ ನಿಷೇಧ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ ಹವಾಯಿ
ವಾಶಿಂಗ್ಟನ್, ಮಾ. 9: ಆರು ಮುಸ್ಲಿಮ್ ಬಾಹುಳ್ಯದ ದೇಶಗಳ ನಿವಾಸಿಗಳು ಅಮೆರಿಕ ಪ್ರವೇಶಿಸುವುದನ್ನು ತಡೆಯುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪರಿಷ್ಕೃತ ಆದೇಶವನ್ನು ಪ್ರಶ್ನಿಸಿ ಅಮೆರಿಕದ ರಾಜ್ಯ ಹವಾಯಿ ನ್ಯಾಯಾಲಯದ ಮೆಟ್ಟಿಲೇರಿದೆ.ಈ ಮೂಲಕ ನೂತನ ಆದೇಶವನ್ನು ಪ್ರಶ್ನಿಸಿದ ಅಮೆರಿಕದ ಮೊದಲ ರಾಜ್ಯವಾಗಿದೆ.
ಮೊದಲ ಆದೇಶದಲ್ಲಿರುವ ಕೆಲವು ಸಂಗತಿಗಳ ಬಗ್ಗೆ ನ್ಯಾಯಾಲಯಗಳು ಕಳವಳಗಳನ್ನು ವ್ಯಕ್ತಪಡಿಸಿದ್ದರೂ, ಪರಿಷ್ಕೃತ ಆದೇಶವು ಹೆಚ್ಚಾಗಿ ಮೊದಲಿನಂತೆಯೇ ಇದೆ ಎಂದು ರಾಜ್ಯದ ಅಟಾರ್ನಿ ಜನರಲ್ ಬುಧವಾರ ವಾದಿಸಿದರು.
ಟ್ರಂಪ್ ಸೋಮವಾರ ಸಹಿ ಹಾಕಿರುವ ಆದೇಶದ ಜಾರಿಯನ್ನು ತಡೆಯುವ ರಾಷ್ಟ್ರವ್ಯಾಪಿ ತಡೆಯಾಜ್ಞೆ ನೀಡಬೇಕೆಂದು ಹವಾಯಿ ನ್ಯಾಯಾಲಯವನ್ನು ಕೋರಿದೆ.
ನೂತನ ಆದೇಶವು 120 ದಿನಗಳ ಕಾಲ ನಿರಾಶ್ರಿತರಿಗೆ ಪ್ರವೇಶ ನೀಡುವುದನ್ನು ತಡೆಯುತ್ತದೆ ಹಾಗೂ ಸಿರಿಯ, ಇರಾನ್, ಲಿಬಿಯ, ಸೊಮಾಲಿಯ, ಯಮನ್ ಮತ್ತು ಸುಡಾನ್‌ಗಳ ನಿವಾಸಿಗಳಿಗೆ ನೂತನ ವೀಸಾಗಳನ್ನು ನೀಡುವುದನ್ನು ನಿಷೇಧಿಸುತ್ತದೆ.
ಟ್ರಂಪ್‌ರ ಮೊದಲ ನಿಷೇಧ ಪಟ್ಟಿಯಲ್ಲಿ ಇರಾಕನ್ನೂ ಸೇರಿಸಲಾಗಿತ್ತು. ಎರಡನೆ ಪಟ್ಟಿಯಿಂದ ಅದರ ಹೆಸರನ್ನು ಕೈಬಿಡಲಾಗಿದೆ. ಅದೇ ವೇಳೆ, ಕಾನೂನುಬದ್ಧ ಖಾಯಂ ನಿವಾಸಿಗಳು ಮತ್ತು ಸೂಕ್ತ ವೀಸಾ ಹೊಂದಿರುವವರನ್ನೂ ನಿಷೇಧ ವ್ಯಾಪ್ತಿಯಿಂದ ಹೊರಗಿರಿಸಲಾಗಿದೆ.
‘‘ಗಣನೀಯ ಬದಲಾವಣೆಯೇನೂ ಆಗಿಲ್ಲ. ಒಂದು ದೇಶವನ್ನು ಹೊರತುಪಡಿಸಿ, ಮುಸ್ಲಿಮ್ ಬಾಹುಳ್ಯದ ದೇಶಗಳ ನಿವಾಸಿಗಳ ಅಮೆರಿಕ ಪ್ರವೇಶಕ್ಕೆ ಹೇರಲಾಗಿರುವ ನಿಷೇಧ ಹಾಗೆಯೇ ಮುಂದುವರಿದಿದೆ’’ ಎಂದು ರಾಜ್ಯದ ಅಟಾರ್ನಿ ಜನರಲ್ ಡೌಗ್ ಚಿನ್ ಹೇಳಿಕೆಯೊಂದರಲ್ಲಿ ತಿಳಿಸಿದರು.
‘‘ನ್ಯಾಯಾಂಗವನ್ನು ಯಾಮಾರಿಸುವ ಸರಕಾರದ ಕೊನೆಯ ಪ್ರಯತ್ನವನ್ನು ನ್ಯಾಯಾಲಯಗಳು ಸಹಿಸಲಾರವು ಹಾಗೂ ಈ ಆದೇಶವನ್ನೂ ಅವುಗಳು ಬೆಂಬಲಿಸಬಾರದು’’ ಎಂದು ಚಿನ್ ಹೇಳಿದ್ದಾರೆ.
ಟ್ರಂಪ್‌ರ ಮೊದಲ ಮುಸ್ಲಿಮ್ ನಿಷೇಧ ಆದೇಶವು ಜಗತ್ತಿನಾದ್ಯಂತದ ವಿಮಾನ ನಿಲ್ದಾಣಗಳಲ್ಲಿ ಭಾರೀ ಗೊಂದಲವನ್ನು ಸೃಷ್ಟಿಸಿತ್ತು.ಆದೇಶ ಹೊರಬಿದ್ದ ಕೆಲವೇ ದಿನಗಳಲ್ಲಿ ಫೆಡರಲ್ ನ್ಯಾಯಾಲಯವೊಂದು ಅದಕ್ಕೆ ತಡೆಯಾಜ್ಞೆ ನೀಡಿತು ಹಾಗೂ ಬಳಿಕ ಮೇಲ್ಮನವಿ ನ್ಯಾಯಾಲಯವೊಂದು ತಡೆಯಾಜ್ಞೆಯನ್ನು ತೆರವುಗೊಳಿಸಲು ನಿರಾಕರಿಸಿತು.ಈಗ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.