ಕಾಂಗ್ರೆಸ್ ಜಾತ್ಯತೀತತೆಯ , ಬಿಜೆಪಿ ರಾಷ್ಟ್ರೀಯತೆಯ ಅಂಗಡಿ ಬಂದ್ ಮಾಡಲಿ : ಉವೈಸಿ
ಹೊಸದಿಲ್ಲಿ, ಮಾ. 9 : ಲಕ್ನೋದಲ್ಲಿ ನಡೆದ ಉಗ್ರ ಕಾರ್ಯಾಚರಣೆಯ ಬಳಿಕ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ನೀಡಿದ ಹೇಳಿಕೆ ಬಗ್ಗೆ ಚರ್ಚೆ ಶುರುವಾಗಿರುವಾಗಲೇ ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಕಾಂಗ್ರೆಸ್ ಹಾಗು ಬಿಜೆಪಿ ಎರಡರ ವಿರುದ್ಧವೂ ಟೀಕಾ ಪ್ರಹಾರ ನಡೆಸಿದ್ದಾರೆ.
" ಮಾಲೇಗಾವ್ ಒಂದು, ಮಾಲೇಗಾವ್ ಎರಡು , ಔರಂಗಾಬಾದ್ , 7/11 - ಇವೆಲ್ಲವೂ ಕಾಂಗ್ರೆಸ್ ಅಧಿಕಾರದಲ್ಲಿರುವಾಗಲೇ ನಡೆದಿವೆ. ಈಗ ಕಾಂಗ್ರೆಸ್ ಆ ಬಗ್ಗೆ ಏನು ಹೇಳುತ್ತದೆ ಎಂಬುದರ ಬಗ್ಗೆ ನಾನು ಕಮೆಂಟ್ ಮಾಡುವುದಿಲ್ಲ. ಆದರೆ ಅವರು ನಡೆಸುತ್ತಿರುವ ಜಾತ್ಯತೀತತೆಯ ಅಂಗಡಿ ಬಂದ್ ಮಾಡಬೇಕು ಹಾಗು ಬಿಜೆಪಿ ರಾಷ್ಟ್ರೀಯತೆಯ ಅಂಗಡಿ ನಡೆಸುವುದನ್ನು ನಿಲ್ಲಿಸಲಿ " ಎಂದು ಉವೈಸಿ ಹೇಳಿದ್ದಾರೆ.
" ಭಾರತೀಯ ಮುಸ್ಲಿಂ ಯುವಕರಿಗೆ ಸಮಾನ ಅವಕಾಶಗಳು ಸಿಗದಿದ್ದರೆ ಅವರು ಪಾಕಿಸ್ತಾನ ಮತ್ತು ಐಸಿಸ್ ಕಡೆ ಆಕರ್ಷಿತರಾಗುತ್ತಾರೆ " ಎಂದು ದಿಗ್ವಿಜಯ್ ಗುರುವಾರ ಹೇಳಿದ್ದರು. " ಇದು ಎಚ್ಚರಿಕೆಯ ಕರೆಗಂಟೆ. ಸರ್ಕಾರ ಎಲ್ಲರನ್ನೂ ಒಟ್ಟಿಗೆ ಮುನ್ನಡೆಸುವ ರೀತಿ ನಡೆಯಬೇಕು. ಹಕ್ಕುಗಳು ಹಾಗು ಅವಕಾಶಗಳನ್ನು ನೀಡುವ ವಿಷಯ ಬಂದಾಗ ಸರ್ಕಾರ ಮುಸ್ಲಿಮರಲ್ಲಿ ಏಕಾಂಗಿ ಭಾವನೆ ಬಾರದಂತೆ ನೋಡಿಕೊಳ್ಳಬೇಕು " ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದರು.
" ಈ ಹೇಳಿಕೆ ನೀಡುವ ಮೂಲಕ ದಿಗ್ವಿಜಯ್ ಸಿಂಗ್ ಭಾರತದಲ್ಲಿ ಐಸಿಸ್ ಚಟುವಟಿಕೆಗಳನ್ನು ಸಮರ್ಥಿಸುವ ಮಾತಾಡಿದ್ದಾರೆ " ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಆಕ್ಷೇಪ ವ್ಯಕ್ತಪಡಿಸಿದ್ದರು.