2018ರಲ್ಲಿ ಇನ್ನೊಂದು ಸ್ವಾತಂತ್ರ ಜನಮತಗಣನೆ : ಸ್ಕಾಟ್‌ಲ್ಯಾಂಡ್ ಫಸ್ಟ್ ಮಿನಿಸ್ಟರ್ ಇಂಗಿತ

Update: 2017-03-09 15:10 GMT

ಎಡಿನ್‌ಬರ್ಗ್, ಮಾ. 9: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರಲು ನಿಗದಿಯಾಗಿರುವ ಕೆಲವೇ ತಿಂಗಳುಗಳ ಮೊದಲು, ಅಂದರೆ 2018ರ ಶರತ್ಕಾಲದಲ್ಲಿ ಸ್ಕಾಟ್‌ಲ್ಯಾಂಡ್ ಸ್ವಾತಂತ್ರದ ಜನಮತಗಣನೆಯನ್ನು ನಡೆಸಬಹುದಾಗಿದೆ ಎಂದು ಸ್ಕಾಟ್‌ಲ್ಯಾಂಡ್‌ನ ಫಸ್ಟ್ ಮಿನಿಸ್ಟರ್ ನಿಕೋಲಾ ಸ್ಟರ್ಜನ್ ಹೇಳಿದ್ದಾರೆ.

ಬ್ರಿಟನ್‌ನಿಂದ ಸ್ಕಾಟ್‌ಲ್ಯಾಂಡ್ ಹೊರಬರುವುದಕ್ಕೆ ಅವಕಾಶ ನೀಡುವ ಜನಮತಗಣನೆಯು ಬ್ರಿಟನ್ ಪಾಲಿಗೆ ವಿಪ್ಲವಕಾರಿಯಾಗಬಹುದು ಹಾಗೂ ಜಗತ್ತಿನ ಐದನೆ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ದೇಶದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಬಹುದು ಎಂದು ಹೇಳಲಾಗಿದೆ.

ಎರಡನೆ ಸ್ವಾತಂತ್ರ ಜನಮತಗಣನೆ ನಡೆಸುವ ಸ್ಕಾಟ್‌ಲ್ಯಾಂಡ್‌ನ ಬೆದರಿಕೆಯು ಬ್ರಿಟನ್ ಪ್ರಧಾನಿ ತೆರೇಸಾ ಮೇ ಮೇಲಿನ ಒತ್ತಡವನ್ನು ಹೆಚ್ಚಿಸಲಿದೆ. ಔಪಚಾರಿಕ ‘ಬ್ರೆಕ್ಸಿಟ್’ (ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವುದು) ಮಾತುಕತೆಗಳಿಗಾಗಿ ಐರೋಪ್ಯ ಒಕ್ಕೂಟದ ಉಳಿದ 27 ದೇಶಗಳೊಂದಿಗೆ ಮಾತುಕತೆ ನಡೆಸಲು ತೆರೇಸಾ ಮೇ ಮುಂದಾಗಿದ್ದಾರೆ.

ಐರೋಪ್ಯ ಒಕ್ಕೂಟದಿಂದ ಹೊರಬರುವ ಪ್ರಕ್ರಿಯೆಯಲ್ಲಿ ನಿರ್ದಿಷ್ಟ ಬೆಳವಣಿಗೆಯಾದಾಗ ಸ್ಕಾಟ್‌ಲ್ಯಾಂಡ್ ಇನ್ನೊಂದು ಸ್ವಾತಂತ್ರ ಜನಮತಗಣನೆಯನ್ನು ನಡೆಸುತ್ತದೆ ಹಾಗೂ ಇದಕ್ಕೆ 2018ರ ಶರತ್ಕಾಲ ಸೂಕ್ತ ಸಮಯವೆಂದು ಅನಿಸುತ್ತದೆ ಎಂದು ಬಿಬಿಸಿಯೊಂದಿಗೆ ಮಾತನಾಡಿದ ನಿಕೋಲಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News