ಕಾಬೂಲ್: ಸೇನಾ ಆಸ್ಪತ್ರೆ ಮೇಲೆ ದಾಳಿ: ಮೃತರ ಸಂಖ್ಯೆ 30ಕ್ಕೆ
Update: 2017-03-09 21:14 IST
ಕಾಬೂಲ್ (ಅಫ್ಘಾನಿಸ್ತಾನ), ಮಾ. 9: ಕಾಬೂಲ್‌ನಲ್ಲಿರುವ ಸೇನಾ ಆಸ್ಪತ್ರೆಯೊಂದರ ಮೇಲೆ ಬುಧವಾರ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 30ಕ್ಕೇರಿದೆ ಹಾಗೂ ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ.
ಕಾಬೂಲ್‌ನ ಅತಿ ಭದ್ರತೆಯ ರಾಜತಾಂತ್ರಿಕ ವಲಯದಲ್ಲಿರುವ 400 ಹಾಸಿಗೆಗಳ ಸೇನಾ ಆಸ್ಪತ್ರೆಯ ಮೇಲೆ ವೈದ್ಯರ ವೇಷದಲ್ಲಿದ್ದ ಭಯೋತ್ಪಾದಕರು ದಾಳಿ ನಡೆಸಿದ ಬಳಿಕ, ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಹಲವು ತಾಸುಗಳವರೆಗೆ ಘರ್ಷಣೆ ನಡೆಯಿತು.
ಕಾಬೂಲ್‌ನ ಹೃದಯ ಭಾಗದಲ್ಲೇ ಭಾರೀ ಪ್ರಮಾಣದ ದಾಳಿ ನಡೆಸುವ ಅಫ್ಘಾನ್ ಭಯೋತ್ಪಾದಕ ಗುಂಪುಗಳ ಸಾಮರ್ಥ್ಯವನ್ನು ಈ ದಾಳಿ ಬಿಂಬಿಸಿದೆ.