‘ಇಂಧನ ಸಾಗಾಟ ಪೈಪ್‌ಲೈನ್‌ಗೆ ಕನ್ನ’ ಅಣಕು ಪ್ರದರ್ಶನ

Update: 2017-03-09 18:47 GMT

ಬಂಟ್ವಾಳ, ಮಾ.9: ತಾಲೂಕಿನ ಅರಳ ಗ್ರಾಮದಲ್ಲಿ ಹಾದು ಹೋಗಿರುವ ಮಂಗಳೂರು- ಹಾಸನ- ಬೆಂಗಳೂರು ಇಂಧನ ಸಾಗಾಟ ಪೈಪ್‌ಲೈನ್ ಬಳಿ ಬುಧವಾರ ಮಧ್ಯಾಹ್ನ ಮಣ್ಣಿನಡಿ ಪ್ರತ್ಯೇಕ ಪೈಪ್ ಅಳವಡಿಸಿ ಅದಕ್ಕೆ ‘ಕನ್ನ’ ಕೊರೆದು ಬಳಿಕ ಪರಿಸರದಲ್ಲಿ ಯಾವುದೇ ರೀತಿಯ ಹಾನಿ ಸಂಭವಿಸದಂತೆ ತ್ವರಿತವಾಗಿ ದುರಸ್ತಿಗೊಳಿಸುವ ಬಗ್ಗೆ ‘ಅಣಕು ಪ್ರದರ್ಶನ’ ನಡೆಯಿತು.

ಒಂದೆಡೆ ಹೆಲ್ಮೆಟ್‌ಧಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಓಡಾಡುತ್ತಿದ್ದರೆ, ಇನ್ನೊಂದೆಡೆ ಬಂಟ್ವಾಳ ಮತ್ತು ಮಂಗಳೂರು ಪೆಟ್ರೋನೆಟ್ ಸಂಸ್ಥೆಗೆ ಸೇರಿದ ಅಗ್ನಿಶಾಮಕ ದಳ ತಂಡ ಸನ್ನದ್ಧರಾಗಿದ್ದರು. ಈ ನಡುವೆ ಮಂಗಳೂರು ಪೆಟ್ರೋನೆಟ್ ಸಂಸ್ಥೆಯ ಮೇಲ್ವಿಚಾರಕ ಎ. ರಾಜನ್, ಉಪವ್ಯವಸ್ಥಾಪಕ ಮಹೇಶ ಹೆಗ್ಡೆ, ಎಚ್‌ಪಿಸಿಎಲ್ ಅಧಿಕಾರಿ ಪ್ರಪುಲ್ ರಂಗರಿಯಾ, ಉಪಅಧಿಕಾರಿ ಕ್ಷೀರಸಾಗರ್ ಮತ್ತಿತರ ಅಧಿಕಾರಿಗಳಿಂದ ಪೈಪ್ ಜೋಡಿಸುತ್ತಿದ್ದ ಪರಿಣತ ಸಿಬ್ಬಂದಿಗೆ ಮಾರ್ಗದರ್ಶನ ನೀಡುತ್ತಿದ್ದರು. ಪೆಟ್ರೋನೆಟ್ ಅಧಿಕಾರಿಗಳಾದ ವಿವೇಕ್ ಹಾಸನ, ರವೀಂದ್ರ ನೆರಿಯಾ, ಬಂಟ್ವಾಳ ಗ್ರಾಮಾಂತರ ಠಾಣೆ ಎಎಸ್ಸೈ ಭಾಸ್ಕರ, ಅಗ್ನಿ ಶಾಮಕ ಠಾಣಾಧಿಕಾರಿ ಸುಂದರ್, ಪಂಜಿಕಲ್ಲು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾವ್ ರಾಜೇಶ್, ಅರಳ ಗ್ರಾಪಂ ಅಧ್ಯಕ್ಷೆ ತುಂಗಮ್ಮ್ಮಾ, ಉಪಾಧ್ಯಕ್ಷ ಜಗದೀಶ್ ಆಳ್ವ ಅಗ್ಗೊಂಡೆ, ಸದಸ್ಯರಾದ ಲಕ್ಷ್ಮೀಧರ ಶೆಟ್ಟಿ, ಆಶ್ರಫ್, ಕಂದಾಯ ನಿರೀಕ್ಷಕ ನವೀನ್ ಮೊದಲಾದವರು ಪಾಲ್ಗೊಂಡಿದ್ದರು. ಇದು ಇಲ್ಲಿನ ಅರಳದಲ್ಲಿ ಮಂಗಳೂರಿನ ಪೆಟ್ರೋನೆಟ್ ಎಂಎಚ್‌ಬಿ ಲಿಮಿಟೆಡ್ ಸಂಸ್ಥೆ ವತಿಯಿಂದ ಬುಧವಾರ ನಡೆದ ಅಣಕು ಪ್ರದರ್ಶನ ಮತ್ತು ಜನಜಾಗೃತಿ ಕಾರ್ಯಕ್ರಮ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News