ರಾಜಕೀಯ ಪಕ್ಷಗಳಿಗೆ ಕ್ಯಾಶ್‌ಲೆಸ್ ದೇಣಿಗೆ ಕಡ್ಡಾಯ : ಚು. ಆಯೋಗ ಚಿಂತನೆ

Update: 2017-03-10 14:10 GMT

ಹೊಸದಿಲ್ಲಿ,ಮಾ.10: ರಾಜಕೀಯ ಪಕ್ಷಗಳಿಗೆ ನೀಡಲಾಗುವ ದೇಣಿಗೆಯ ಮಿತಿಯನ್ನು ಪ್ರತಿ ವ್ಯಕ್ತಿಗೆ 20 ಸಾವಿರ ರೂ.ನಿಂದ 2 ಸಾವಿರ ರೂ.ಗೆ ಇಳಿಸಿದ ಬಳಿಕ ಚುನಾವಣಾ ಆಯೋಗವು ಇದೀಗ ಚುನಾವಣೆಗಳಲ್ಲಿ ಕಪ್ಪುಹಣದ ಬಳಕೆಯನ್ನು ಹತ್ತಿಕ್ಕಲು ನಗದುರಹಿತ ದೇಣಿಗೆಯನ್ನು ಕಡ್ಡಾಯಗೊಳಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ.

ಒಂದು ವೇಳೆ ರಾಜಕೀಯ ಪಕ್ಷಗಳು ಕಾನೂನಿನಲ್ಲಿರುವ ನ್ಯೂನತೆಗಳನ್ನು ಬಳಸಿಕೊಂಡು ಪ್ರಸ್ತಾಪಿತ ಚುನಾವಣೆ ನಿಯಮಗಳನ್ನು ಹಾಗೂ ಆದಾಯ ತೆರಿಗೆ ಕಾನೂನುಗಳನ್ನು ಬದಿಗೊತ್ತಲು ಯತ್ನಿಸಿದಲ್ಲಿ, ಆ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ನಸೀಮ್ ಝೈದಿ ಎಚ್ಚರಿಕೆ ನೀಡಿದ್ದಾರೆ.

‘‘ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯು ನಗದುರಹಿತವಾಗಿರುವುದು ಅತ್ಯಂತ ಅಪೇಕ್ಷಣಿಯಾದುದು. ಆದರೆ ಅದನ್ನು ಸಾಧಿಸಲು ಸಾಧ್ಯವೇ ಎಂಬುದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ. ಅಂತಿಮವಾಗಿ ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯು ನಗದುರಹಿತವಾಗಿರಬೇಕೆಂದು ಇಡೀ ಸಮಾಜವೇ ಹೇಳುತ್ತಿದೆ’’ ಎಂದು ಝೈದಿ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಆದರೆ ಈ ವಿಷಯದ ಬಗ್ಗೆ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳ ಜೊತೆ ಪತ್ರವ್ಯವಹಾರವನ್ನು ಆರಂಭಿಸಿಲ್ಲವೆಂದು ಅವರು ಸ್ಪಷ್ಟಪಡಿಸಿದರು. ಬಹುತೇಕ ರಾಜಕೀಯ ಪಕ್ಷಗಳು ಸಣ್ಣ ಮೊತ್ತದ ದೇಣಿಗೆಗಳಿಗೆ ಮಾತ್ರವೇ ನಗದು ವ್ಯವಸ್ಥೆಯನ್ನು ಆವಲಂಭಿಸಿರುವುದನ್ನು ಅವರು ಒಪ್ಪಿಕೊಂಡರು.

ರಾಜಕೀಯ ಪಕ್ಷಗಳಿಗೆ ನೀಡಲಾಗುವ ದೇಣಿಗೆಯ ಮೊತ್ತವನ್ನು ಪ್ರತಿ ವ್ಯಕ್ತಿಗೆ 20 ಸಾವಿರ ರೂ.ನಿಂದ 2 ಸಾವಿರ ರೂ.ಗೆ ಇಳಿಸಿರುವ ಆಯೋಗದ ಕ್ರಮವು ಪಾರದರ್ಶಕತೆ ಯನ್ನು ಹೆಚ್ಚಿಸಲು ನೆರವಾಗಲಿದೆಯೆಂದರು.

ರಾಜಕೀಯ ಪಕ್ಷಗಳು ನಿಧಿಸಂಗ್ರಹಣೆಗಾಗಿ ಸಣ್ಣ ಮುಖಬೆಲೆಯ ಕೂಪನ್‌ಗಳನ್ನು ಅಥವಾ ರಶೀತಿಗಳನ್ನು ಬಳಸಿಕೊಳ್ಳುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ವೇಳೆ ಸಣ್ಣ ಮೊತ್ತದ ದೇಣಿಗೆಗಳು ಹರಿದುಬಾರದೆ ಇದ್ದಲ್ಲಿ ರಾಜಕೀಯ ಪಕ್ಷಗಳಿಗೆ ತೊಂದರೆಯಾಗಲಿದೆ. ಯಾಕೆಂದರೆ ಈ ದೇಣಿಗೆಗಳು ಅವರಿಗೆ ರ್ಯಾಲಿಗಳನ್ನು ಆಯೋಜಿಸಲು ನೆರವಾಗುತ್ತಿವೆಯೆಂದರು.

ಒಂದು ವೇಳೆ ಈ ರೀತಿಯ ನಿಧಿಸಂಗ್ರಹಣೆ ದುರ್ಬಳಕೆಯಾಗುತ್ತಿರುವುದು ಕಂಡು ಬಂದಲ್ಲಿ ಆಯೋಗ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಝೈದಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News