ವಿಚಾರಣೆಗೆ ಬಾಕಿ ಇರುವ ಭ್ರಷ್ಟಾಚಾರ ಪ್ರಕರಣ : ರೈಲ್ವೆ ಇಲಾಖೆಗೆ ಅಗ್ರಸ್ಥಾನ

Update: 2017-03-10 14:25 GMT

ಹೊಸದಿಲ್ಲಿ, ಮಾ.10: ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬಹಳಷ್ಟು ಪ್ರಕರಣಗಳು ಸರಕಾರದ ವಿವಿಧ ಇಲಾಖೆಯಲ್ಲಿ ವಿಚಾರಣೆಗೆ ಬಾಕಿ ಇದ್ದು ರೈಲ್ವೇ ಇಲಾಖೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ ಜಾಗೃತಿ ಆಯೋಗದ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ರೈಲ್ವೇ ಇಲಾಖೆಯಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಸಂಪಾದನೆಗೆ ಸಂಬಂಧಿಸಿ ಒಟ್ಟು 730 ಪ್ರಕರಣ ವಿಚಾರಣೆಗೆ ಬಾಕಿಯಿದ್ದು ಇದರಲ್ಲಿ ಹಿರಿಯ ಅಧಿಕಾರಿಗಳನ್ನು ಒಳಗೊಂಡಿರುವ 350 ಪ್ರಕರಣಗಳಿವೆ. ಬಿಎಸ್‌ಎನ್‌ಎಲ್‌ನಲ್ಲಿ 526 ಪ್ರಕರಣ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ 268, ದಿಲ್ಲಿ ಸರಕಾರದಲ್ಲಿ 193, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 164, ಬ್ಯಾಂಕ್ ಆಫ್ ಬರೋಡಾದಲ್ಲಿ 128, ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 82 ಪ್ರಕರಣಗಳು ವಿಚಾರಣೆಗೆ ಬಾಕಿ ಇದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಶಿಸ್ತುಕ್ರಮ ವಿಚಾರಣೆಗೆ ಬಾಕಿ ಇರುವ ಪ್ರಕರಣದ ಸಂಖ್ಯೆ ಕನಿಷ್ಠ 100 ಆಗಿದ್ದರೆ, ಸಿಂಡಿಕೇಟ್ ಬ್ಯಾಂಕ್‌ನಲ್ಲಿ 91, ಯೂನಿಯನ್ ಬ್ಯಾಂಕ್‌ನಲ್ಲಿ 50 , ಕೇಂದ್ರ ಲೋಕೋಪಯೋಗಿ ಇಲಾಖೆಯಲ್ಲಿ 47, ಪ್ರಸಾರ ಭಾರತಿಯಲ್ಲಿ 41, ಕಾರ್ಪೊರೇಶನ್ ಬ್ಯಾಂಕ್‌ನಲ್ಲಿ 36, ಏರ್ ಇಂಡಿಯಾದಲ್ಲಿ 26, ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನಲ್ಲಿ 30 ಹಾಗೂ ಪ್ರಧಾನಮಂತ್ರಿಯವರ ಸಚಿವಾಲಯದಲ್ಲಿ ಎರಡು ಪ್ರಕರಣಗಳು ಶಿಸ್ತುಕ್ರಮ ವಿಚಾರಣೆಗೆ ಬಾಕಿಯಿದೆ.

ಭ್ರಷ್ಟಾಚಾರ ಪ್ರಕರಣದ ಕುರಿತ ವಿಚಾರಣೆಯನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಜಾಗೃತ ಆಯೋಗ ಕೈಗೊಂಡ ಸ್ವಪ್ರೇರಿತ ಉಪಕ್ರಮದಲ್ಲಿ ಈ ಮಾಹಿತಿ ಸಂಗ್ರಹಿಸಲಾಗಿದೆ. 2016ರ ಡಿ.31ರವರೆಗಿನ ಅವಧಿಗೆ ಸಂಬಂಧಿಸಿದಂತೆ, ಒಟ್ಟು 290 ಸಂಸ್ಥೆಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ.

ಭ್ರಷ್ಟಾಚಾರ ಪ್ರಕರಣದ ತನಿಖೆ ತ್ವರಿತಗೊಳಿಸುವಂತೆ ಆಗಿಂದಾಗ್ಗೆ ಜಾಗೃತ ಆಯೋಗವು ಒತ್ತಾಯಿಸುತ್ತಲೇ ಬಂದಿದೆ. ಸಂಬಂಧಿತ ಶಿಸ್ತು ಕ್ರಮಾಧಿಕಾರಿಗಳು ಪ್ರಕರಣವನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಲಾಗಿದೆ ಎಂದು ಜಾಗೃತ ಆಯೋಗ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News