3,200 ವರ್ಷ ಹಿಂದಿನ ದೊರೆಯ 26 ಅಡಿ ಎತ್ತರದ ಪ್ರತಿಮೆ ಪತ್ತೆ
ಪ್ರಾಚೀನ ಈಜಿಪ್ಟ್‌ನ ಕೈರೋ (ಈಜಿಪ್ಟ್), ಮಾ. 10: ಈಜಿಪ್ಟ್‌ನ ಪುರಾತನಶಾಸ್ತ್ರಜ್ಞರು 26 ಅಡಿ ಎತ್ತರದ ಬೃಹತ್ ಪ್ರತಿಮೆಯೊಂದನ್ನು ಪತ್ತೆಹಚ್ಚಿದ್ದಾರೆ. ಪ್ರತಿಮೆಯು ಕ್ರಿಸ್ತಪೂರ್ವ 1279 ಮತ್ತು 1213ರ ನಡುವೆ ಈಜಿಪ್ಟನ್ನು ಆಳಿದ ದ್ವಿತೀಯ ಫರಾವೋ ರಾಮ್ಸಸ್‌ರನ್ನು ಹೋಲುತ್ತದೆ ಎಂದು ಹೇಳಲಾಗಿದೆ.
ರಾಜಧಾನಿ ಕೈರೋದ ಪೂರ್ವ ಭಾಗದ ಕೊಳೆಗೇರಿಯೊಂದರಲ್ಲಿ ಪ್ರತಿಮೆ ಪತ್ತೆಯಾಗಿದೆ ಎಂದು ‘ದ ಗಾರ್ಡಿಯನ್’ ವರದಿ ಮಾಡಿದೆ. ಈಜಿಪ್ಟ್‌ನ ಪ್ರಾಚೀನಶಾಸ್ತ್ರ ಸಚಿವಾಲಯ ಈ ಸಂಶೋಧನೆಯನ್ನು ಗುರುವಾರ ಪ್ರಕಟಿಸಿದೆ.
‘‘ದೊರೆಯೊಬ್ಬರ ಬೃಹತ್ ಪ್ರತಿಮೆಯೊಂದರ ಬೃಹತ್ ಸಂಶೋಧನೆಯನ್ನು ಘೋಷಿಸುವುದಕ್ಕಾಗಿ ಕಳೆದ ಮಂಗಳವಾರ ಅವರು ನಮ್ಮನ್ನು ಕರೆದರು. ಅದು ದ್ವಿತೀಯ ರಾಮ್ಸಸ್‌ರ ಪ್ರತಿಮೆಯಾಗಿರುವ ಸಾಧ್ಯತೆಯಿದೆ’’ ಎಂದು ಪುರಾತನಶಾಸ್ತ್ರ ಸಚಿವ ಖಾಲಿದ್ ಅಲ್-ಅನಾನಿ ಹೇಳಿದರು.
‘‘ನಾವು ಪ್ರತಿಮೆಯ ಮೇಲ್ಭಾಗ ಮತ್ತು ತಲೆಯ ಕೆಳ ಭಾಗವನ್ನು ಪತ್ತೆಹಚ್ಚಿದೆವು. ಈಗ ನಾವು ತಲೆಯನ್ನು ಮೇಲಕ್ಕೆತ್ತಿದ್ದೇವೆ ಹಾಗೂ, ಬಲಗಿವಿ ಮತ್ತು ಬಲಗಣ್ಣಿನ ತುಂಡನ್ನು ಪತ್ತೆಹಚ್ಚಿದ್ದೇವೆ’’ ಎಂದರು.
ಪ್ರತಿಮೆ ಪತ್ತೆಯಾದ ಸ್ಥಳವು ಪ್ರಾಚೀನ ನಗರ ಹೆಲಿಯೋಪೊಲಿಸ್‌ನಲ್ಲಿರುವ ದ್ವಿತೀಯ ರಾಮ್ಸಸ್ ದೇವಸ್ಥಾನದ ಅವಶೇಷಗಳ ಸಮೀಪ ಪತ್ತೆಯಾಗಿದೆ.
ಜರ್ಮನಿ ಮತ್ತು ಈಜಿಪ್ಟ್‌ನ ಪುರಾತನಶಾಸ್ತ್ರಜ್ಞರು ಉತ್ಖನನ ಕಾರ್ಯವನ್ನು ಕೈಗೆತ್ತಿಕೊಂಡಿದ್ದರು.
ರಾಮ್ಸಸ್‌ರ ಮೊಮ್ಮಗ ದ್ವಿತೀಯ ಫರಾವೋ ಸೆಟಿಯ ಆಳೆತ್ತರದ ಕಲ್ಲಿನ ಪ್ರತಿಮೆಯ ಭಾಗವೊಂದನ್ನೂ ಅವರು ಪತ್ತೆಹಚ್ಚಿದ್ದಾರೆ.