×
Ad

ಪಂಚರಾಜ್ಯಗಳಲ್ಲಿ ನಡೆದ ವಿಧಾಸಭಾ ಚುನಾವಣೆಗಳ ಮತ ಎಣಿಕೆ ಪ್ರಗತಿಯಲ್ಲಿದ್ದು, ಮೋದಿ ಅಲೆ ನಿಚ್ಚಳವಾಗಿ ಕಂಡುಬಂದಿದೆ

Update: 2017-03-11 13:11 IST

ಉತ್ತರ ಪ್ರದೇಶ ವಿಧಾನಸಭೆಯ 403 ಸ್ಥಾನಗಳ ಪೈಕಿ 305 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದ್ದು, ಸ್ಪಷ್ಟ ಬಹುಮತದೊಂದಿಗೆ ಸರಕಾರವನ್ನು ರಚಿಸುವ ಸಂಭ್ರಮದಲ್ಲಿದೆ. ಒಂದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಎಸ್‌ಪಿ-ಕಾಂಗ್ರೆಸ್ ಮೈತ್ರಿಕೂಟ 72, ಬಿಎಸ್‌ಪಿ 16ಮತ್ತು ಇತರರು 19 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.

 ಪಂಜಾಬ್‌ನಲ್ಲಿ ಕಾಂಗ್ರೆಸ್ ಪಕ್ಷವು ಸರಕಾರ ರಚನೆಯ ದಾರಿಯಲ್ಲಿದೆ. ವಿಧಾನಸಭೆಯ 117 ಸ್ಥಾನಗಳ ಪೈಕಿ 71ರಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದ್ದು, ಎರಡು ಕ್ಷೇತ್ರಗಳಲ್ಲಿ ಆ ಪಕ್ಷದ ಅಭ್ಯರ್ಥಿಗಳ ಗೆಲುವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಗದ್ದುಗೆಯ ಮೇಲೆ ಕಣ್ಣಿರಿಸಿದ್ದ ಆಪ್ 24 ಕ್ಷೇತ್ರಗಳಲ್ಲಿ ಮುಂದಿದ್ದರೆ ಆಡಳಿತ ಶಿರೋಮಣಿ ಅಕಾಲಿ ದಳ-ಬಿಜೆಪಿ ಮೈತ್ರಿಕೂಟ ಕೇವಲ 18 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಇತರ ಎರಡು ಸ್ಥಾನಗಳಲ್ಲಿ ಇತರರು ಮುನ್ನಡೆಯಲ್ಲಿದ್ದಾರೆ.

 ಉತ್ತರಾಖಂಡದಲ್ಲಿ ಬಿಜೆಪಿ ಅಧಿಕಾರಕ್ಕೇರುವುದು ಸ್ಪಷ್ಟವಾಗಿದೆ. 70 ಕ್ಷೇತ್ರಗಳ ಪೈಕಿ 49ರಲ್ಲಿ ಅದು ಮುನ್ನಡೆಯಲ್ಲಿದ್ದು, ಐದು ಕ್ಷೇತ್ರಗಳಲ್ಲಿ ಅದರ ಅಭ್ಯರ್ಥಿಗಳ ಗೆಲುವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳು 13 ಮತ್ತು ಇತರರು ಮೂರು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.

ಮಣಿಪುರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಈಗಾಗಲೇ 10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಇತರ ಹತ್ತು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಬಿಜೆಪಿಯ ನಾಲ್ವರು ಅಭ್ಯರ್ಥಿಗಳ ಗೆಲುವಿನ ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು, ಇತರ 16 ಕ್ಷೇತ್ರಗಳಲ್ಲಿ ಅದರ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಇತರ ನಾಲ್ಕು ಕ್ಷೇತ್ರಗಳಲ್ಲಿ ಇತರರು ಮುನ್ನಡೆಯಲ್ಲಿದ್ದಾರೆ.

ಅತ್ತ ಗೋವಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, 6 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಬಿಜೆಪಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, 2 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಇತರರು ಒಂದು ಕ್ಷೇತ್ರದಲ್ಲಿ ಇತರರು ಗೆಲುವು ಸಾಧಿಸಿದ್ದು,2 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಆಪ್ ಶೂನ್ಯ ಸಾಧನೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News