ರಾಜಕೀಯ ಕ್ಷೇತ್ರಕ್ಕೆ ಗುಡ್‌ಬೈ : ಇರೋಮ್ ಶರ್ಮಿಳಾ

Update: 2017-03-11 14:47 GMT

ಇಂಫಾಲ, ಮಾ.11: ಇಂದು ಬೆಳಿಗ್ಗೆ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷಿಸುವ ಬಗ್ಗೆ ಒಮ್ಮೆ ಯೋಚಿಸಿದ್ದೆ. ಆದರೆ ಈಗ ನನ್ನ ದಾರಿ ಸ್ಪಷ್ಟವಾಗಿದೆ. ನನ್ನ ಮನೋಭಾವ ಮತ್ತು ನನ್ನ ಅಂತರಂಗದ ಮಧ್ಯೆ ಎಲ್ಲೋ ಸಂಪರ್ಕ ತಪ್ಪಿಹೋಗಿದೆ. ರಾಜಕೀಯ ಕ್ಷೇತ್ರ ನನಗಾಗದು. ಆದ್ದರಿಂದ ರಾಜಕೀಯ ಕ್ಷೇತ್ರಕ್ಕೆ ಗುಡ್‌ಬೈ ಹೇಳುತ್ತೇನೆ ಎಂದು ಮಣಿಪುರದ ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ತಿಳಿಸಿದ್ದಾರೆ.

  ಮಾನವ ಹಕ್ಕುಗಳ ಹೋರಾಟದ ಮುಂಚೂಣಿಯಲ್ಲಿದ್ದ ಶರ್ಮಿಳಾ, ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗುವ ಒಂದು ತಿಂಗಳ ಮೊದಲಷ್ಟೇ ರಾಜಕೀಯ ಕ್ಷೇತ್ರಕ್ಕೆ ಇಳಿದಿದ್ದರು. ‘ಪೀಪಲ್ಸ್ ರಿಸರ್ಜೆನ್ಸ್ ಆ್ಯಂಡ್ ಜಸ್ಟಿಸ್ ಪಾರ್ಟಿ’ ಎಂಬ ಪಕ್ಷವನ್ನು ಸ್ಥಾಪಿಸಿ ತಾನೂ ಸೇರಿ, ಪಕ್ಷದಿಂದ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ರಾಜಕೀಯ ಪಕ್ಷ ಸ್ಥಾಪಿಸಿರುವುದು ಒಂದು ಒಳ್ಳೆಯ ನಿರ್ಧಾರವಾಗಿತ್ತು ಎನ್ನುವ ಅವರು, ರಾಜ್ಯದ ಯುವಜನರ ಸಹಕಾರದಿಂದ ಪಕ್ಷ ಬೆಳೆಯಬೇಕು ಎಂಬುದು ನನ್ನ ಆಶಯವಾಗಿದೆ. ವಿವಿಧ ರಾಜಕೀಯ ಪಕ್ಷಗಳಿಂದ ನನಗೆ ಆಹ್ವಾನ ಬಂದಿತ್ತು. ಆದರೆ ಅವೆಲ್ಲವನ್ನೂ ತಿರಸ್ಕರಿಸಿದ್ದೇನೆ ಎಂದವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಒಕ್ರಮ್ ಇಬೊಬಿ ಸಿಂಗ್ ಅವರೆದುರು ಥೌಬಾಲ್ ಕ್ಷೇತ್ರದಿಂದ ತಾನು ಸ್ಪರ್ಧಿಸುವುದಾಗಿ ಶರ್ಮಿಳಾ ಘೋಷಿಸಿದಾಗ ಹಲವರು ಹುಬ್ಬೇರಿಸಿದ್ದರು. ಇದೊಂದು ಸಾಹಸಮಯ ನಡೆಯಾಗಿತ್ತು. ಯಾಕೆಂದರೆ ಈ ಕ್ಷೇತ್ರ ಇಬೊಬಿ ಸಿಂಗ್ ಅವರ ಭದ್ರಕೋಟೆ ಎನಿಸಿದ್ದು ಇಲ್ಲಿ ಮೂರು ಬಾರಿ ಅವರು ಗೆದ್ದು ಬಂದಿದ್ದರು. ಇಂತಹ ಕಠಿಣ ಸ್ಪರ್ಧೆಗೆ ತನ್ನನ್ನು ಒಡ್ಡಿಕೊಂಡಿದ್ದ ಶರ್ಮಿಳಾ ಅವರ ನಿರ್ಧಾರಕ್ಕೆ ಶ್ಲಾಘನೆ ವ್ಯಕ್ತವಾಗಿತ್ತು. ಆದರೆ ಚುನಾವಣಾ ಫಲಿತಾಂಶ ಮಾತ್ರ ಅನಿರೀಕ್ಷಿತವಾಗಿತ್ತು. ಈ ಕ್ಷೇತ್ರದಲ್ಲಿ ಶರೋಮ್ ಗೆಲ್ಲುವುದು ಬಹುತೇಕ ಅಸಂಭವ ಎಂದು ಖಾತರಿಯಾಗಿತ್ತು. ಆದರೆ ಶರ್ಮಿಳಾ ಪಡೆದ ಮತಗಳ ಸಂಖ್ಯೆ ಕೇವಲ 90 ಮಾತ್ರ. ಈ ಕ್ಷೇತ್ರದಲ್ಲಿ ಚಲಾವಣೆಯಾದ ‘ನೋಟಾ’ ಮತಗಳ ಸಂಖ್ಯೆಯೂ ಸುಮಾರು 50ರಷ್ಟು ಆಗಿದೆ ಎಂಬುದನ್ನು ಗಮನಿಸಬಹುದು.

  ಚುನಾವಣೆ ಫಲಿತಾಂಶ ಪ್ರಕಟವಾದಾಗ ನನಗೆ ದ್ರೋಹ ಎಸಗಲಾಗಿದೆ ಎಂದು ಮೊದಲು ಅನಿಸಿತು. ಆದರೆ ಇದರಲ್ಲಿ ಜನರನ್ನು ದೂರಿ ಪ್ರಯೋಜನವಿಲ್ಲ. ಅವರು ಮುಗ್ದರು. ಯಾಕೆಂದರೆ ಇಲ್ಲಿ ಹಣದ ಪ್ರಭಾವ ಕೆಲಸ ಮಾಡಿದೆ. ನೈತಿಕವಾಗಿ ನನಗೆ ಸೋಲಾಗಿದೆ ಎಂದು ನಾನು ನಂಬಲಾರೆ. ಜನರು ನನ್ನನ್ನು ಚುನಾಯಿಸಲು ಬಯಸಿರಬಹುದು. ಆದರೆ ಅವರ ಮತಗಳನ್ನು ಖರೀದಿಸಲಾಗಿತ್ತು. ಸೋದರಿ, ನಿನಗೆ ಮತ ನೀಡಹುದಿತ್ತು. ಆದರೆ ನಾವು ಈಗಾಗಲೇ ಹಣ ಪಡೆದಾಗಿದೆ. ನೀನು ತುಂಬಾ ತಡ ಮಾಡಿದ್ದೀ- ಎಂದವರು ನನಗೆ ತಿಳಿಸಿದ್ದರು ಎನ್ನುತ್ತಾರೆ ಶರ್ಮಿಳಾ.

ನಾನು ಮಣಿಪುರ ತೊರೆದು ಕೇರಳಕ್ಕೆ ಹೋಗುತ್ತೇನೆ. ಅಲ್ಲಿ ಆಶ್ರಮವೊಂದರಲ್ಲಿ ತಿಂಗಳು ಕಳೆದು ಧ್ಯಾನದ ಮೂಲಕ ಮನಶ್ಯಾಂತಿ ಪಡೆಯುತ್ತೇನೆ . ಆದರೆ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ) ವಿರುದ್ಧದ ಹೋರಾಟ ಮುಂದುವರಿಯುತ್ತದೆ ಎಂದವರು ತಿಳಿಸಿದ್ದಾರೆ.

  ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ಇಂಫಾಲದ ಬಳಿ ಇರುವ ಕಾರ್ಮೆಲ್ ಜ್ಯೋತಿ ಕಾನ್ವೆಂಟ್‌ಗೆ ತೆರಳಿದ 44ರ ಹರೆಯದ ಶರ್ಮಿಳಾ, ಅಲ್ಲಿಯ ಅನಾಥಾಶ್ರಮದಲ್ಲಿರುವ ಎಚ್‌ಐವಿ ಪೀಡಿತ ಮಕ್ಕಳೊಂದಿಗೆ ಕಾಲ ಕಳೆದರು. ಮಕ್ಕಳೊಂದಿಗೆ ಕಾಲ ಕಳೆದರೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News