×
Ad

ಗೋವಾದಲ್ಲಿ ‘ಆಪ್’ ಶೂನ್ಯ ಸಾಧನೆ

Update: 2017-03-11 20:40 IST

ಪಣಜಿ, ಮಾ.11: ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನಿಕಟ ಸ್ಪರ್ಧೆ ನಡೆದಿದ್ದು ಕಾಂಗ್ರೆಸ್ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಭಾರೀ ನಿರೀಕ್ಷೆಯೊಂದಿಗೆ ಗೋವಾದಲ್ಲಿ ಚುನಾವಣಾ ಕಣಕ್ಕಿಳಿದಿದ್ದ ಆಮ್ ಆದ್ಮಿ ಪಕ್ಷವನ್ನು ಮತದಾರರು ಸಂಪೂರ್ಣ ತಿರಸ್ಕರಿಸಿದ್ದು, ಪಕ್ಷ ಶೂನ್ಯ ಸಾಧನೆ ಮಾಡಿದೆ.

ಪ್ರಾದೇಶಿಕ ಪಕ್ಷಗಳಾದ ಗೋವಾ ಫಾರ್ವರ್ಡ್ ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ ತಲಾ ಮೂರು ಸ್ಥಾನಗಳನ್ನು ಗೆದ್ದುಕೊಂಡಿದೆ. ಪಕ್ಷೇತರರು ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಮತದಾನಕ್ಕೆ ಕೆಲವೇ ದಿನದ ಮೊದಲು ಬಿಜೆಪಿಯೊಂದಿಗಿನ ಮೈತ್ರಿ ಕಡಿದುಕೊಂಡಿದ್ದ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ, ಮೂರು ಪಕ್ಷಗಳ ಮೈತ್ರಿಕೂಟದ ಸಹಪಕ್ಷವಾಗಿ ಗುರುತಿಸಿಕೊಂಡಿತ್ತು.

2012ರಲ್ಲಿ ನಡೆದಿದ್ದ ಚುನಾವಣೆಯಲ್ಲಿ 21 ಸ್ಥಾನ ಗೆದ್ದಿದ್ದ ಬಿಜೆಪಿ ಬಹುಮತದೊಂದಿಗೆ ಅಧಿಕಾರ ಪಡೆವಲ್ಲಿ ಯಶಸ್ವಿಯಾಗಿತ್ತು. ಹಾಲಿ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೆಕರ್ ಮ್ಯಾಂಡ್ರೆಮ್ ಕ್ಷೇತ್ರದಲ್ಲಿ ಸೋಲುಂಡು ಮುಖಭಂಗಕ್ಕೆ ಒಳಗಾಗಿದ್ದಾರೆ. ಹಾಲಿ ಸಚಿವರಾಗಿರುವ ದಯಾನಂದ್ ಮಾಂಡ್ರೇಕರ್ (ಸಿಯೊಲಿಮ್ ಕ್ಷೇತ್ರ) ಮತ್ತು ದಿಲೀಪ್ ಪರುಲೇಕರ್ (ಸ್ಯಾಲಿಗೊ ಕ್ಷೇತ್ರ) ಕೂಡಾ ಸೋಲುಂಡಿದ್ದಾರೆ.

  ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಗೆದ್ದ ಪ್ರಮುಖರಲ್ಲಿ ಸೇರಿದ್ದಾರೆ. ಭಾರೀ ನಿರೀಕ್ಷೆಯೊಂದಿಗೆ ಆಖಾಡಕ್ಕೆ ಇಳಿದಿದ್ದ ಆಮ್ ಆದ್ಮಿ ಪಾರ್ಟಿ ಯಾವುದೇ ಪರಿಣಾಮ ಬೀರುವಲ್ಲಿ ವಿಫಲವಾಗಿದೆ. ಆರೆಸ್ಸೆಸ್ ಬಂಡಾಯ ಮುಖಂಡ ಸುಭಾಷ್ ವೆಲಿಂಗ್‌ಕರ್ ಹುಟ್ಟುಹಾಕಿದ್ದ ಗೋವಾ ಸುರಕ್ಷಾ ಮಂಚ್ ಪಕ್ಷ ಹಾಗೂ ಶಿವಸೇನೆ ಪಕ್ಷಗಳೂ ವಿಫಲವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News