ಗೋವಾದಲ್ಲಿ ತ್ರಿಶಂಕು ವಿಧಾನಸಭೆ : ಅಧಿಕಾರಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮೇಲಾಟ
ಪಣಜಿ,ಮಾ.11: ಶನಿವಾರ ಚುನಾವಣಾ ಫಲಿತಾಂಶಗಳು ಹೊರಬಿದ್ದ ಬಳಿಕ ಗೋವಾದಲ್ಲಿ ತ್ರಿಶಂಕು ವಿಧಾನಸಭೆ ಸೃಷ್ಟಿಯಾಗಿದ್ದು, ನೂತನ ಸರಕಾರವನ್ನು ತಾವೇ ರಚಿಸುವುದಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಹೇಳಿಕೊಂಡಿವೆ.
40 ಸದಸ್ಯಬಲದ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ 17 ಸ್ಥಾನಗಳೊಂದಿಗೆ ಏಕೈಕ ಅತಿ ದೊಡ್ಡ ಪಕ್ಷವಾಗಿ ಮೂಡಿ ಬಂದಿದೆ. ಬಿಜೆಪಿ 13 ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದರೆ, 10 ಸ್ಥಾನಗಳನ್ನು ಇತರರು ಬಾಚಿಕೊಂಡಿದ್ದಾರೆ.
ಸರಕಾರ ರಚನೆಗೆ ಪಕ್ಷವು ಶೀಘ್ರವೇ ಹಕ್ಕು ಮಂಡಿಸಲಿದೆ ಎಂದು ಕಾಂಗ್ರೆಸ್ ವಕ್ತಾರರು ಹೇಳಿದರೆ, ಅತ್ತ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೂ ಇದೇ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಲಕ್ಷ್ಮೀಕಾಂತ ಪಾರ್ಸೇಕರ್ ಸೇರಿದಂತೆ ಏಳು ಸಂಪುಟ ಸಚಿವರು ಈ ಚುನಾವಣೆಯಲ್ಲಿ ಸೋಲನ್ನಪ್ಪಿದ್ದಾರೆ.
ಮಾಂಡ್ರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ದಯಾನಂದ ಸೋಪ್ಟೆ ಅವರು 16,490 ಮತಗಳನ್ನು ಗಳಿಸಿ ಪಾರ್ಸೇಕರ್‌ಗೆ ಸೋಲಿನ ರುಚಿಯನ್ನು ತೋರಿಸಿದ್ದಾರೆ. ಪಾರ್ಸೇಕರ್ 9,371 ಮತಗಳನ್ನು ಗಳಿಸಿದ್ದಾರೆ.
ಪ್ರವಾಸೋದ್ಯಮ ಸಚಿವ ದಿಲೀಪ್ ಪರುಳೇಕರ್, ಜಲಸಂಪನ್ಮೂಲ ಸಚಿವ ದಯಾನಂದ ಮಾಂಡ್ರೇಕರ್, ಕೈಗಾರಿಕಾ ಸಚಿವ ಮಹಾದೇವ ನಾಯ್ಕೇ, ಫ್ಯಾಕ್ಟರಿಗಳು ಮತ್ತು ಬಾಯ್ಲರ್‌ಗಳ ಸಚಿವ ಹಾಗೂ ರಾಜ್ಯ ಎಂಜಿಪಿ ಅಧ್ಯಕ್ಷ ದೀಪಕ್ ಧಾವಳಿಕರ್, ಮೀನುಗಾರಿಕೆ ಸಚಿವ ಅವೆರ್ಟಾನೊ ಫುರ್ಟಾಡೊ ಹಾಗೂ ಅರಣ್ಯ ಮತ್ತು ಪರಿಸರ ಸಚಿವ ರಾಜೇಂದ್ರ ಆರ್ಲೆಕರ್ ಅವರು ಸೋಲನ್ನಪ್ಪಿದ್ದಾರೆ.
ಧಾವಳಿಕರ್ ಮತ್ತು ಅವರ ಸೋದರ ಸುದಿನ್ ಧಾವಳಿಕರ್ ಅವರನ್ನು ಗೋವಾದಲ್ಲಿ ಚುನಾವಣೆ ಪ್ರಕಟಣೆಗೆ ಸುಮಾರು ಒಂದು ತಿಂಗಳು ಮೊದಲು ಪಾರ್ಸೇಕರ್ ಅವರು ಸಂಪುಟದಿಂದ ವಜಾಗೊಳಿಸಿದ್ದರು.
ಚುನಾವಣಾ ಫಲಿತಾಂಶ ಬಿಜೆಪಿ ನೇತೃತ್ವದ ಮೈತ್ರಿಕೂಟದ ಆಡಳಿತಕ್ಕೆ ಕಪಾಳಮೋಕ್ಷವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್ ಅವರು ಹೇಳಿದರು.
ಎರಡು ವರ್ಷಗಳ ಹಿಂದೆ ಬಹುಕೋಟಿ ರೂ.ಗಳ ಲುಯಿಸ್ ಬರ್ಗರ್ ಲಂಚ ಹಗರಣದಲ್ಲಿ ಬಂಧಿಸಲ್ಪಟ್ಟಿದ್ದ ಎನ್‌ಸಿಪಿಯ ಚರ್ಚಿಲ್ ಅಲೆಮಾವೊ ಅವರು ಬೆನಾಲಿಮ್‌ನಲ್ಲಿ ಗೆಲ್ಲುವ ಮೂಲಕ ಮತ್ತೊಮ್ಮೆ ರಾಜಕೀಯ ಪ್ರವೇಶ ಮಾಡಿದ್ದಾರೆ.
ಗೋವಾ ಫಾರ್ವರ್ಡ್ ಮತ್ತು ಎಂಜಿಪಿ ತಲಾ ಮೂರು ಸ್ಥಾನಗಳನ್ನು ಮತ್ತು ಪಕ್ಷೇತರರು ಮೂರು ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ.
ಯಾವುದೇ ಪಕ್ಷವು ಸ್ಪಷ್ಟ ಬಹುಮತ ಗಳಿಸುವಲ್ಲಿ ವಿಫಲಗೊಂಡಿರುವ ಹಿನ್ನೆಲೆಯಲ್ಲಿ ಈ ಪ್ರಾದೇಶಿಕ ಪಕ್ಷಗಳು ಮತ್ತು ಪಕ್ಷೇತರರು ಸರಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.
ಭಾರೀ ನಿರೀಕ್ಷೆಗಳನ್ನಿಟ್ಟುಕೊಂಡಿದ್ದ ಆಪ್ ಶೂನ್ಯ ಸಂಪಾದನೆ ಮಾಡಿದೆ. ಅದರ ಮುಖ್ಯಮಂತ್ರಿ ಹುದ್ದೆ ಅಭ್ಯರ್ಥಿ ಎಲ್ವಿಸ್ ಗೋಮ್ಸ್ ಕೇವಲ 3,336 ಮತಗಳನ್ನು ಗಳಿಸುವ ಮೂಲಕ ಕಂಕೋಳಿ ಕ್ಷೇತ್ರದಲ್ಲಿ ನಾಲ್ಕನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ನಾವು ಜನತೆಯ ನಿರ್ಧಾರವನ್ನು ಗೌರವಿಸುತ್ತೇವೆ. ಆಪ್ ಗೋವಾದಲ್ಲಿ ತನ್ನ ಪ್ರಭಾವ ಹೊಂದಿದೆ ಎನ್ನುವುದನ್ನು ಅಲ್ಲಗಳೆಯಲಾಗದು ಮತ್ತು ನಾವು ಕಾರ್ಯವನ್ನು ಮುಂದುವರಿಸುತ್ತೇವೆ ಎಂದು ಗೋಮ್ಸ್ ಹೇಳಿದರು.
ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಮಾಜಿ ಆರೆಸ್ಸೆಸ್ ನಾಯಕ ಸುಭಾಷ್ ವೆಲಿನಕರ್ ಅವರ ಗೋವಾ ಸುರಕ್ಷಾ ಮಂಚ್ ತನ್ನ ಖಾತೆಯನ್ನು ತೆರೆಯುವಲ್ಲಿ ವಿಫಲಗೊಂಡಿದೆ.