ಕೊಹ್ಲಿಯನ್ನು ಪ್ರಾಣಿಗಳಿಗೆ ಹೋಲಿಸುವ ಚಿತ್ರ ಪ್ರಕಟಿಸಿದ ‘ಫಾಕ್ಸ್ ಸ್ಪೋರ್ಟ್ಸ್'
ಹೊಸದಿಲ್ಲಿ, ಮಾ.11: ಕಳೆದ ಎರಡನೆ ಟೆಸ್ಟ್‌ನ ವೇಳೆ ಅಂಪೈರ್ ತೀರ್ಪು ಪರಿಶೀಲನಾ ನಿಯಮ(ಡಿಆರ್‌ಎಸ್) ಬಳಕೆಗೆ ಸಂಬಂಧಿಸಿ ಹುಟ್ಟಿಕೊಂಡ ವಿವಾದವನ್ನು ಬಿಸಿಸಿಐ ಮತ್ತು ಕ್ರಿಕೆಟ್ ಆಸ್ಟ್ರೇಲಿಯ ಬಗೆ ಹರಿಸಿದ್ದರೂ, ಆಸ್ಟ್ರೇಲಿಯದ ಮಾಧ್ಯಮಗಳು ಭಾರತದ ಆಟಗಾರರ ವಿರುದ್ಧ ತನ್ನ ಸಿಟ್ಟನ್ನು ಮುಂದುವರಿಸಿದೆ. ಆಸ್ಟ್ರೇಲಿಯದ ‘ಫಾಕ್ಸ್ ಸ್ಪೋರ್ಟ್ಸ್ ಆಸ್ಟ್ರೇಲಿಯ’ ಎಂಬ ಕ್ರೀಡಾ ಚಾನಲೊಂದು ‘ವೆಟ್ಟೆಲ್ ಆಫ್ ದಿ ವೀಕ್’ಎಂಬ ಶೀರ್ಷಿಕೆಯಡಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾವಚಿತ್ರ ಜತೆಗೆ ‘ಎ ಫಂಡಾ, ಎ ಪಪ್ಪಿ, ಎ ಕಿಟ್ಟನ್’ ಚಿತ್ರವನ್ನು ಪ್ರಕಟಿಸಿ ನಿಮ್ಮ ಆಯ್ಕೆಗೆ ಮತ ಚಲಾಯಿಸಿ ಎಂದು ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯ ಎರಡನೆ ಕ್ರಿಕೆಟ್ ಟೆಸ್ಟ್‌ನ ವೇಳೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅಸಭ್ಯವಾಗಿ ವರ್ತಿಸಿದ್ದರೆಂದು ಆಸ್ಟ್ರೇಲಿಯದ ದಿನಪತ್ರಿಕೆ ‘ದಿ ಡೈಲಿ ಟೆಲಿಗ್ರಾಫ್‌ನಲ್ಲಿ ಆರೋಪಿಸಿತ್ತು.
ಆಸ್ಟ್ರೇಲಿಯದ ಎರಡನೆ ಇನಿಂಗ್ಸ್‌ನಲ್ಲಿ ಹ್ಯಾಂಡ್ಸ್‌ಕಂಬ್ ಅವರು ಅಶ್ವಿನ್ ಎಸೆತದಲ್ಲಿ ಸಹಾಗೆ ಕ್ಯಾಚ್ ನೀಡುವಾಗ ಕೊಹ್ಲಿ ಆಸ್ಟ್ರೇಲಿಯನ್ ಬಾಕ್ಸ್‌ನತ್ತ ನೋಡುತ್ತಾ ಆಸ್ಟ್ರೇಲಿಯ ದ ಕುತ್ತಿಗೆ ಕತ್ತರಿಸಿದಂತೆ ಕೈ ಸನ್ನೆ ಮಾಡಿದರು ಎಂದು ಮಾಧ್ಯಮಗಳು ಅರೋಪಿಸಿತ್ತು.