ಹಿಂದು-ಮುಸ್ಲಿಮ್ ರಾಜಕೀಯದಿಂದ ನಾವು ಹೊರಬರಬೇಕಾಗಿದೆ : ಅಮಿತ್ ಶಾ
ಹೊಸದಿಲ್ಲಿ,ಮಾ.11: ನಾವು ಹಿಂದು -ಮುಸ್ಲಿಮ್ ರಾಜಕಾರಣದಿಂದ ಹೊರಬರ ಬೇಕಾದ ಅಗತ್ಯವಿದೆ. ಪ್ರತಿಯೊಬ್ಬರೂ ಅಭಿವೃದ್ಧಿ ಮತ್ತು ಸಾಧನೆಯ್ನು ಬಯಸುತ್ತಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಶನಿವಾರ ರಾತ್ರಿ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಯು ಸರಕಾರ ರಚಿಸಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರಾನಂತರದ ಅತ್ಯಂತ ಬಲಿಷ್ಠ ನಾಯಕರು ಎನ್ನುವ ಸತ್ಯವನ್ನು ನಾವು ಒಪ್ಪಿಕೊಳ್ಳಬೇಕಾದ ಅಗತ್ಯವಿದೆ. ಮತದಾರರು ನಮ್ಮ ಟೀಕಾಕಾರರಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ ಎಂದು ಅವರು ಹೇಳಿದರು. ಇದೇ ವೇಳೆ ಪಂಚರಾಜ್ಯಗಳ ಮತದಾರರಿಗೆ ಕೃತಜ್ಞತೆಗಳನ್ನು ಅವರು ವ್ಯಕ್ತಪಡಿಸಿದರು.
ಅಭಿವೃದ್ಧಿ ಮತ್ತು ಸಾಧನೆಗಳ ರಾಜಕಾರಣ ಭವಿಷ್ಯದ ಚುನಾವಣೆಗಳಲ್ಲಿ ಪ್ರಮುಖವಾಗಿರುತ್ತವೆ ಎಂದ ಅವರು, ಭಾರತದ ಬೆಳವಣಿಗೆಗೆ ಉತ್ತರ ಪ್ರದೇಶದ ಅಭಿವೃದ್ಧಿ ಅಗತ್ಯವಾಗಿದೆ ಮತ್ತು ಅದರ ನೆರವಿಲ್ಲದೆ ಎರಡಂಕಿಯ ಪ್ರಗತಿಯನ್ನು ನಾವು ಊಹಿಸಲೂ ಸಾಧ್ಯವಿಲ್ಲ. ಜನರು ನಮ್ಮಲ್ಲಿಟ್ಟಿರುವ ವಿಶ್ವಾಸಕ್ಕೆ ನಾವು ನ್ಯಾಯ ವೊದಗಿಸಲಿದ್ದೇವೆ ಎಂದರು.
ನೋಟು ಅಮಾನ್ಯ ನಿರ್ಧಾರಕ್ಕೆ ಸಂಬಂಧಿಸಿದಂತೆ ಜನರು ಮೋದಿಯವರ ಬೆಂಬಲಕ್ಕೆ ಬಲವಾಗಿ ನಿಂತಿದ್ದಾರೆ ಎನ್ನುವದನ್ನು ಚುನಾವಣಾ ಫಲಿತಾಂಶಗಳು ರಜುವಾತುಗೊಳಿಸಿವೆ ಎಂದರು.