" ಮತಯಂತ್ರ ಆಗುವುದು ಗುಜರಾತ್ ನಲ್ಲಿ, ತನಿಖೆ ನಡೆಯಬೇಕು"
ಪಾಟ್ನಾ, ಮಾ. 11 : ಇಲೆಕ್ಟ್ರಾನಿಕ್ ಮತ ಯಂತ್ರಗಳಲ್ಲಿ ಗೋಲ್ ಮಾಲ್ ಆಗಿದೆ ಎಂಬ ಬಿಎಸ್ಪಿ ನಾಯಕಿ ಮಾಯಾವತಿಯವರ ಹೇಳಿಕೆಗೆ ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಬೆಂಬಲ ವ್ಯಕ್ತಪಡಿಸಿದ್ದಾರೆ.
" ಮಾಯಾವತಿಜಿ ಅವರು ಹೇಳುತ್ತಿರುವುದರ ಬಗ್ಗೆ ಚುನಾವಣಾ ಆಯೋಗ ಖಂಡಿತ ತನಿಖೆ ನಡೆಸಬೇಕು. ಇಲೆಕ್ಟ್ರಾನಿಕ್ ಮತ ಯಂತ್ರಗಳನ್ನು ಗುಜರಾತ್ ನಲ್ಲಿ ತಯಾರಿಸಲಾಗುತ್ತದೆ ಎಂದು ಪ್ರತಿಯೊಬ್ಬರಿಗೂ ಗೊತ್ತಿದೆ. ಹಾಗಾಗಿ ಅವುಗಳಲ್ಲಿ ಏನಾದರೂ ಅಕ್ರಮ ನಡೆದಿರಬಹುದು ಎಂಬುದನ್ನು ನಿರಾಕರಿಸಲಾಗದು. ಈ ಬಗ್ಗೆ ತನಿಖೆ ನಡೆಸಬೇಕು " ಎಂದು ಲಾಲು ಹೇಳಿದ್ದಾರೆ.
ಈ ಬಗ್ಗೆ ನಾವು ಈ ಹಿಂದೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೆವು ಹಾಗು ಪ್ರತಿಭಟನೆ ನಡೆಸಿದ್ದೆವು. ಆಗ ಮತದಾನಕ್ಕಿಂತ ಮೊದಲು ಎಲ್ಲ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಅಣಕು ಮತದಾನ ನಡೆಸಿ ಮತಯಂತ್ರಗಳು ಸರಿಯಿವೆಯೇ ಎಂದು ತೋರಿಸಲಾಗುವುದು ಎಂದು ಚುನಾವಣಾ ಅಯೋಗ ಹೇಳಿತ್ತು. ಆದರೆ ಉತ್ತರ ಪ್ರದೇಶದಲ್ಲಿ ಹಾಗೆ ಮಾಡಲಾಗಿದೆಯೇ ಎಂದು ಗೊತ್ತಿಲ್ಲ " ಎಂದು ಲಾಲು ಹೇಳಿದ್ದಾರೆ.
" ಇಂದು ಮತ ಎಣಿಕೆ ನಡೆದ ಇವಿಎಂ ಗಳನ್ನು ಜೋಪಾನವಾಗಿ ತೆಗೆದಿಟ್ಟು ಅವುಗಳಲ್ಲಿ ಯಾವುದಾದರೂ ತಾಂತ್ರಿಕ ಸಮಸ್ಯೆ ಇದೆಯೇ ಎಂದು ಚುನಾವಣಾ ಆಯೋಗ ತನಿಖೆ ನಡೆಸಬೇಕು " ಎಂದು ಲಾಲು ಆಗ್ರಹಿಸಿದ್ದಾರೆ.